ತಾಲಿಬಾನ್ನ ಸೌಮ್ಯವಾದಿ ಬಣವನ್ನು ಸಂಪರ್ಕಿಸುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಯತ್ನವನ್ನು ಅತಾರ್ಕಿಕ ಎಂದು ತಳ್ಳಿಹಾಕಿರುವ ಆಫ್ಘಾನಿಸ್ತಾನದ ತಾಲಿಬಾನ್, ಯುದ್ಧಕ್ಕೆ ತೆರೆಎಳೆಯಲು ವಿದೇಶಿ ಪಡೆಗಳು ಇಲ್ಲಿಂದ ನಿರ್ಗಮಿಸುವುದು ಉಳಿದಿರುವ ಏಕೈಕ ದಾರಿ ಎಂದು ಹೇಳಿವೆ.
ಸೌಮ್ಯವಾದಿ ತಾಲಿಬಾನ್ ಶಕ್ತಿಗಳನ್ನು ಮುಟ್ಟಲು ಒಬಾಮಾ ಮುಕ್ತಮನಸ್ಸು ಹೊಂದಿದ್ದಾರೆ. ಅದು ಅತಾರ್ಕಿಕವಾದ್ದರಿಂದ ಅದಕ್ಕೆ ಯಾವುದೇ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದು ಬಂಡುಕೋರರ ಗುಂಪಿನ ವಕ್ತಾರ ಖಾರಿ ಮಹಮ್ಮದ್ ಯೂಸುಫ್ ತಿಳಿಸಿದ್ದಾನೆ.
ಒಬಾಮಾ ಪ್ರಸ್ತಾವನೆ ಕುರಿತು ತಾಲಿಬಾನ್ ಉನ್ನತ ನಾಯಕ ಮುಲ್ಲಾ ಮಹ್ಮದ್ ಓಮರ್ ಪ್ರತಿಕ್ರಿಯಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವನು ಉತ್ತರಿಸುತ್ತ ಮೇಲಿನಂತೆ ತಿಳಿಸಿದ್ದಾನೆ. ತಾಲಿಬಾನ್ ಒಗ್ಗಟ್ಟಾಗಿದ್ದು, ಏಕ ನಾಯಕ, ಏಕ ಗುರಿ ಮತ್ತು ಏಕ ನೀತಿಯನ್ನು ಹೊಂದಿದೆ. ಸೌಮ್ಯವಾದಿ ತಾಲಿಬಾನ್ ಕುರಿತು ಮಾತನಾಡುವುದು ಏಕೆಂದು ತಮಗೆ ಅರ್ಥವಾಗಿಲ್ಲ. ಹೋರಾಟಮಾಡದಿರುವ, ಮನೆಯಲ್ಲಿ ಕುಳಿತಿರುವ ತಾಲಿಬಾನ್ಗಳು ಎನ್ನುವುದು ಅದರ ಅರ್ಥವಾಗಿದ್ದರೆ, ಅವರ ಜತೆ ಮಾತುಕತೆ ನಡೆಸುವುದು ಅರ್ಥಹೀನ ಎಂದು ಅವನು ಹೇಳಿದ್ದಾನೆ. |