ಕಾಶ್ಮೀರ ವಿವಾದದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬೇಕೆಂಬ ಕರೆಗಳ ನಡುವೆ, ಕಾಶ್ಮೀರ ವಿವಾದದಲ್ಲಿ ಅಮೆರಿಕ ಆಡಳಿತ ಮಧ್ಯಸ್ಥಿಕೆ ವಹಿಸುವ ಸಂಭವವಿಲ್ಲ ಮತ್ತು ಹಸ್ತಕ್ಷೇಪರಹಿತ ಅಮೆರಿಕದ ನೀತಿ ಮುಂದುವರಿಯಲಿದೆ ಎಂದು ಇತ್ತೀಚಿನ ಕಾಂಗ್ರೆಸ್ ವರದಿ ತಿಳಿಸಿದೆ.
ಒಬಾಮಾ ಅಧ್ಯಕ್ಷಗಿರಿಯಲ್ಲಿ ಭಾರತ-ಅಮೆರಿಕ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದ್ದು, ಕಾಶ್ಮೀರ ವಿವಾದ ಮತ್ತು ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಷಯಗಳ ಬಗ್ಗೆ ಸಂಘರ್ಷಕ್ಕೆ ಎಡೆಯಾಗುವ ಶಂಕೆಯಿಲ್ಲ ಎಂದು ಭಾರತ-ಅಮೆರಿಕ ಸಂಬಂಧಗಳ ಕುರಿತ 83 ಪುಟಗಳ ವರದಿ ತಿಳಿಸಿದೆ.
ಅಮೆರಿಕದ ನೂತನ ಅಧ್ಯಕ್ಷರ ನೇಮಕದ ಬಳಿಕ ಅಮೆರಿಕ-ಭಾರತ ಸಂಬಂಧ ಕುರಿತಂತೆ ಸಾಮಾನ್ಯ ನೀತಿ ನಿರೀಕ್ಷಿಸಲಾಗಿದೆ ಎಂದು ಅದು ಹೇಳಿದೆ. ಅಮೆರಿಕ ಕಾಂಗ್ರೆಸ್ ಸಂಶೋಧನೆ ವಿಭಾಗವು ಕಾಲಕಾಲಕ್ಕೆ ಇಂತಹ ವರದಿಗಳನ್ನು ಸಿದ್ಧಪಡಿಸುತ್ತಿದೆ. ಒಬಾಮಾ ಆಡಳಿತವು ಕಾಶ್ಮೀರ ವಿಷಯದಲ್ಲಿ ತಲೆಹಾಕುತ್ತದೆಂಬ ಕೆಲವು ಶಂಕೆಗಳನ್ನು ಉಲ್ಲೇಖಿಸಿದ ವರದಿ, ಹಾಗಾಗುವುದು ಅಸಂಭವನೀಯವೆಂದು ತಿಳಿಸಿದ್ದು, ಅಮೆರಿಕವು ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡದ ನೀತಿಯನ್ನು ಮುಂದುವರಿಸುತ್ತದೆ ಎಂದು ಹೇಳಿದೆ. |