ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಪುನಃ ಅಧಿಕಾರವನ್ನು ಕಬಳಿಸದಂತೆ ಅಮೆರಿಕ ತಪ್ಪಿಸಬೇಕು ಎಂದು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿದ್ದಾರೆ. ಮಂಗಳವಾರ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಆಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯತಂತ್ರದ ಬಗ್ಗೆ ಒಬಾಮಾ ಆಡಳಿತವಿನ್ನೂ ಪರಾಮರ್ಶೆ ನಡೆಸುತ್ತಿರುವ ನಡುವೆ, 2001ರಲ್ಲಿ ಪತನಗೊಂಡ ತಾಲಿಬಾನ್ ಪುನಃ ಅಧಿಕಾರ ಕಬಳಿಸದಂತೆ ಖಾತರಿಗೆ ಅಮೆರಿಕ ಪ್ರಯತ್ನಿಸಬೇಕು ಎಂದು ಗೇಟ್ಸ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವನ್ನು ತಾಲಿಬಾನ್ ಮರುವಶಮಾಡಿಕೊಂಡು ಆಫ್ಘಾನಿಸ್ತಾನವನ್ನು ಅಲ್ ಖೈದಾ ಮತ್ತಿತರ ಉಗ್ರರಿಗೆ ಸ್ವರ್ಗವಾಗಿ ಪರಿವರ್ತಿಸುವುದನ್ನು ತಪ್ಪಿಸುವ ಯೋಜನೆ ರೂಪಿಸಬೇಕು ಎಂದು ಗೇಟ್ಸ್ ತಿಳಿಸಿದರು.
ಬಂಡುಕೋರ ಸೌಮ್ಯವಾದಿ ಶಕ್ತಿಗಳ ಜತೆ ಮಾತುಕತೆಗೆ ದೃಢ ನಿಲುವು ಹೊಂದುವುದು ಆಡಳಿತದ ಗುರಿಯೇ ಎಂದು ಅವರನ್ನು ಪ್ರಶ್ನಿಸಿದಾಗ, ತಾಲಿಬಾನ್ ಜತೆ ಸಂಭವನೀಯ ಮಾತುಕತೆ ಬಗ್ಗೆ ನೇರವಾಗಿ ಹೇಳಲಿಲ್ಲ.
2001ರಲ್ಲಿ ತಾಲಿಬಾನ್ ಆಡಳಿತವನ್ನು ಬುಡಮೇಲು ಬಾಡಿದ ಬಳಿಕ, ತಾಲಿಬಾನ್ ಬಂಡುಕೋರರು ಅಲ್ ಖೈದಾ ಜತೆ ಮೈತ್ರಿಹೊಂದಿ ಆಫ್ಘಾನಿಸ್ತಾನದಲ್ಲಿ ಪುಟಿದೆದ್ದಿದ್ದಾರೆ. ಗಡಿಯ ಬಳಿ ಪಾಕಿಸ್ತಾನದಲ್ಲಿ ಸುರಕ್ಷಿತ ಸ್ವರ್ಗದ ಅನುಕೂಲ ಪಡೆದ ತಾಲಿಬಾನ್ ಅಲ್ಲಿಂದ ಆಫ್ಘಾನಿಸ್ತಾನಕ್ಕೆ ನುಸುಳುವ ಮೂಲಕ ಭದ್ರತಾ ಸಮಸ್ಯೆ ಸೃಷ್ಟಿಸುತ್ತಿದ್ದಾರೆಂದು ಗೇಟ್ಸ್ ಹೇಳಿದರು.
|