ಅಲಾಬಾಮಾದಲ್ಲಿ ಮಂಗಳವಾರ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ ಕನಿಷ್ಠ 10 ಜನರು ಬಲಿಯಾಗಿದ್ದಾರೆ. ಶೂಟಿಂಗ್ ಬಳಿಕ ಆ ವ್ಯಕ್ತಿ ಬಂದೂಕಿನಿಂದ ಸ್ವತಃ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಅಲಬಾಮಾ ಸಾರ್ವಜನಿಕ ಸುರಕ್ಷತೆ ಇಲಾಖೆ ತಿಳಿಸಿದೆ.
ಫ್ಲೋರಿಡಾ ಗಡಿ ಬಳಿಯ ಸಾಮ್ಸನ್ ಮತ್ತು ಜಿನಿವಾ ಮನೆಗಳು, ಪೆಟ್ರೋಲ್ ಕೇಂದ್ರ, ಅಂಗಡಿಗಳು ಮತ್ತು ವಾಹನಗಳ ಮೇಲೆ ಅವನು ಮನಬಂದಂತೆ ಗುಂಡಿನದಾಳಿ ನಡೆಸಿದ. ಮನೆಯೊಂದರಲ್ಲಿದ್ದ ಮಗು ಸೇರಿದಂತೆ ಐವರು ಮೃತಪಟ್ಟರು. ಮೃತಪಟ್ಟ ಕೆಲವು ದುರ್ದೈವಿಗಳು ಬಂದೂಕುಧಾರಿಯ ಕುಟುಂಬಕ್ಕೆ ಸೇರಿದವರೆಂದು ಹೇಳಲಾಗಿದೆ.
ಗುಂಡಿನ ದಾಳಿ ಬಳಿಕ ದುಷ್ಕರ್ಮಿಯ ತಾಯಿಯ ಶವ ಆಕೆಯ ಸುಟ್ಟುಹೋದ ಮನೆಯಲ್ಲಿ ಪತ್ತೆಯಾಗಿದೆ. ಆಕೆಯ ಮೇಲೆ ಗುಂಡುಹಾರಿಸಿರುವುದು ಸ್ಪಷ್ಟಪಟ್ಟಿಲ್ಲ. ಶಂಕಿತನು ಸ್ಯಾಮ್ಸನ್‌ನಲ್ಲಿರುವ ತಾತ, ಚಿಕ್ಕಮ್ಮ ಮತ್ತು ಚಿಕ್ಕಪ್ಪನನ್ನು ಹತ್ಯೆ ಮಾಡಿದ್ದಾನೆಂದು ಸ್ಥಳೀಯ ತನಿಖಾಧಿಕಾರಿ ತಿಳಿಸಿದ್ದಾರೆ.
ಅವನು ಸ್ಯಾಮಸನ್‌ನಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗಿ ಅರೆ ಸ್ವಯಂಚಾಲಿತ ಬಂದೂಕಿನಿಂದ ಜನರ ಮೇಲೆ ಸಿಕ್ಕಾಪಟ್ಟೆ ಗುಂಡು ಹಾರಿಸಿದನೆಂದು ರೆವರೆಂಡ್ ಮೈಕ್ ಶಿರಾ ಹೇಳಿದ್ದಾರೆ. ಸ್ಯಾಮ್‌ಸನ್‌ನಿಂದ ಜೀನಿವಾ ಪೂರ್ವಕ್ಕೆ 19 ಕಿಮೀ ವಾಹನ ಚಲಾಯಿಸಿದ. ಒಂದು ಹಂತದಲ್ಲಿ ಪೊಲೀಸ್ ಅಧಿಕಾರಿಗಳು ಅವನನ್ನು ಬೆನ್ನಟ್ಟಿ ಅವನ ಕಾರಿಗೆ ತಮ್ಮ ವಾಹನವನ್ನು ಡಿಕ್ಕಿಹೊಡೆಸಿದ ಬಳಿಕ ಗುಂಡಿನಚಕಮಕಿ ನಡೆಯಿತೆಂದು ಹೇಳಲಾಗಿದೆ. |