ಟಿಬೆಟ್ ಭೂಲೋಕದ ನರಕ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಹೇಳಿಕೆಯನ್ನು ನಿರಾಕರಿಸಿರುವ ಚೀನಾದ ಮಾಧ್ಯಮ ಟಿಬೆಟ್ ಭೂಲೋಕದ ಸ್ವರ್ಗ ಎಂದು ಬುಧವಾರ ಘೋಷಿಸಿದೆ. ಚೀನದ ವಿರುದ್ಧ ವಿಫಲ ಬಂಡಾಯದ 50ನೇ ವರ್ಷಾಚರಣೆ ಸಂಕೇತವಾಗಿ ದಲೈಲಾಮಾ ಭಾಷಣ ಮಾಡುತ್ತಾ, ಟಿಬೆಟ್ ಮೇಲೆ ಚೀನಾ ಹಿಡಿತದಿಂದ ಟಿಬೆಟ್ ಭೂಮಿಯಲ್ಲಿ ನರಕಸದೃಶವಾಗಿದ್ದು, ಅವರ್ಣನೀಯ ಕಷ್ಟ,ವಿನಾಶಗಳನ್ನು ತಂದಿದೆ ಎಂದು ಹೇಳಿದ್ದರು.
ದಲೈಲಾಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾದ ಅಧಿಕೃತ ಮಾಧ್ಯಮ ಕ್ಸಿನುವಾ ಸುದ್ದಿಸಂಸ್ಥೆ, ಭೂಮಿಯ ನರಕವು ವಾಸ್ತವವಾಗಿ ಸಾಮಾನ್ಯ ಟಿಬೆಟನ್ನರಿಗೆ ಸ್ವರ್ಗಸಮಾನವಾಗಿದೆ ಎಂದು ತಿಳಿಸಿದೆ. ಚೀನಾ ಮತ್ತು ಟಿಬೆಟಿಗರ ನಡುವೆ ಹೆಚ್ಚಿದ ಉದ್ವಿಗ್ನತೆ ನಡುವೆ, ದಲೈಲಾಮಾ ಜತೆ ಮಾತುಕತೆ ಆರಂಭಿಸುವಂತೆ ಅಮೆರಿಕ ವಿದೇಶಾಂಗ ಇಲಾಖೆ ಒತ್ತಾಯಿಸಿದ್ದು, ಹಿಮಾಲಯ ಪ್ರದೇಶದಲ್ಲಿ ಕೆಡುಕಿನ ಚೀನಾ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ದಲೈಲಾಮಾ ಸ್ವಾತಂತ್ರ್ಯ ಕೋರಿದ್ದಾರೆಂದು ಚೀನಾ ಆರೋಪವನ್ನು ದಲೈಲಾಮಾ ನಿರಾಕರಿಸಿದ್ದು, ಟಿಬೆಟನ್ನರಿಗೆ ಸೀಮಿತ ಸ್ವಾಯತ್ತತೆ ಮತ್ತು ಚೀನಾ ದಬ್ಬಾಳಿಕೆ ಅಂತ್ಯವನ್ನು ಬಯಸಿದ್ದಾಗಿ ಹೇಳಿದ್ದಾರೆ.
ಕ್ಸಿನುವಾ ಸುದ್ದಿಸಂಸ್ಥೆ ದಲೈಲಾಮಾ ವಿರುದ್ಧ ವಾಗ್ದಾಳಿ ಮಾಡಿದ್ದು, 'ಜನರ ಗಮನಸೆಳೆಯಲು ಮಗು ಅಳುವಂತೆ, ಮುದಿ ಭಿಕ್ಕು ಸುಳ್ಳು ಆರೋಪಗಳನ್ನು ಮಾಡುತ್ತಾ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿದೆ. |