ಕೊಲಂಬೊ: ಶ್ರೀಲಂಕಾದ ಈಶಾನ್ಯ ಭಾಗದಲ್ಲಿ ಶ್ರೀಲಂಕಾ ಸೇನೆ ಮತ್ತು ತಮಿಳು ಬಂಡುಕೋರರ ನಡುವೆ ಭಾರೀ ಕಾಳಗ ನಡೆಯುತ್ತಿದೆ ಎಂದು ಮಿಲಿಟರಿ ಮತ್ತು ತಮಿಳು ವ್ಯಾಘ್ರ ಬಂಡುಕೋರರಿಗೆ ಸಮೀಪವರ್ತಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಸಂಘರ್ಷಗಳಲ್ಲಿ ಬಂಡುಕೋರ ಹಿರಿಯ ನಾಯಕ ಸಬರತ್ನಂ ಸೆಲ್ವದುರೈನನ್ನು ಹತ್ಯೆ ಮಾಡಿರುವುದಾಗಿ ಸೇನೆ ತಿಳಿಸಿದೆ.
50ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದು, ಸೇನೆಯ ಫಿರಂಗಿಯನ್ನು ಕೈವಶ ಮಾಡಿಕೊಂಡಿದ್ದಾಗಿ ಬಂಡುಕೋರರ ಪರ ತಮಿಳುನೆಟ್ ವೆಬ್‌ಸೈಟ್‌ನಲ್ಲಿ ಹೇಳಿದೆ. ಆದರೆ ಪತ್ರಕರ್ತರಿಗೆ ಯುದ್ಧವಲಯದಲ್ಲಿ ಪ್ರವೇಶವಿಲ್ಲದ್ದರಿಂದ ಎರಡೂ ಕಡೆಯ ಹೇಳಿಕೆಗಳನ್ನು ದೃಢಪಡಿಸುವ ಮಾರ್ಗವಿಲ್ಲ. ಸಬರತ್ನಂ ಸೆಲ್ವದುರೈ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹಳೆಯ ಸಂಗಡಿಗನಾಗಿದ್ದು, ಅವನ ಸಾವು ದೃಢಪಟ್ಟರೆ ಎಲ್‌ಟಿಟಿಇ ನೈತಿಕಸ್ಥೈರ್ಯಕ್ಕೆ ಭಾರೀ ಪೆಟ್ಟು ಬಿದ್ದಹಾಗಾಗುತ್ತದೆ.
ಬಂಡುಕೋರರ ಹಿಡಿತದ ಪಟ್ಟಣವಾದ ಪುದುಕುಡಿಯರುಪ್ಪು ಸುತ್ತಮುತ್ತ ನಡೆದ ಕದನದಲ್ಲಿ ತಮಿಳೆಂತಿ ಎಂದು ಹೆಸರಾದ ಸೆಲ್ವದುರೈ ಹತನಾಗಿದ್ದಾನೆಂದು ಮಿಲಿಟರಿ ತಿಳಿಸಿದೆ. ಪುದುಕುಡಿಯರುಪ್ಪುವಿನ ಈಶಾನ್ಯದಲ್ಲಿ ವಾರಾಂತ್ಯದ ಹೋರಾಟದಲ್ಲಿ ಅವನು ಸತ್ತಿರುವುದು ದೃಢಪಟ್ಟಿದ್ದು, ಘರ್ಷಣೆಗಳ ಬಳಿಕ 150 ಹೆಚ್ಚು ಎಲ್‌ಟಿಟಿಇ ಉಗ್ರರ ಶವಗಳು ಪತ್ತೆಯಾಗಿವೆಯೆಂದು ಶ್ರೀಲಂಕಾ ಸೇನೆಯ ವೆಬ್‌ಸೈಟ್ ತಿಳಿಸಿದೆ. ಸರ್ಕಾರದ ದಾಳಿಯಲ್ಲಿ ಮೃತಪಟ್ಟ ಎರಡನೇ ಹಿರಿಯ ನಾಯಕ ಅವನಾಗಿದ್ದು, 2007ರಲ್ಲಿ ಬಂಡುಕೋರರ ರಾಜಕೀಯದಳದ ನಾಯಕ ತಮಿಳುಸೆಲ್ವನ್ ವಾಯುದಾಳಿಯಲ್ಲಿ ಮೃತಪಟ್ಟಿದ್ದ. ಸೆಲ್ವದುರೈ ಸಾವಿನ ಬಗ್ಗೆ ಬಂಡುಕೋರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. |