ಪಾಕಿಸ್ತಾನದಲ್ಲಿ ಆಳವಾದ ರಾಜಕೀಯ ಕ್ಷೋಬೆಯಿಂದ ಸ್ಫೋಟನಾಕಾರಿ ಪರಿಸ್ಥಿತಿ ಮೂಡಿದ್ದು, ಉನ್ನತ ಸರ್ಕಾರಿ ಅಧಿಕಾರಿಗಳು ತಮ್ಮ ಹತ್ಯೆಗೆ ಪಿತೂರಿ ನಡೆಸಿದ್ದಾರೆಂದು ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಆರೋಪಿಸಿದ್ದಾರೆ. ಸರ್ಕಾರ ಸರ್ವಾಧಿಕಾರವನ್ನು ಪೋಷಿಸುತ್ತಿದೆಯೆಂದು ಬ್ರಿಟಿಷ್ ದಿನಪತ್ರಿಕೆ ಗಾರ್ಡಿಯನ್ಗೆ ನೀಡಿದ ಸಂದರ್ಶನದಲ್ಲಿ ನವಾಜ್ ಷರೀಫ್ ಟೀಕಿಸಿದ್ದಾರೆ. ಪ್ರಜಾಪ್ರಭುತ್ವದ ಮರೆಯಲ್ಲಿ ಇಂತಹ ನೀತಿಗಳನ್ನು ಅನುಸರಿಸುವುದರಿಂದ ಧರ್ಮಾಂಧರಿಗೆ ಮಾತ್ರ ಅನುಕೂಲವಾಗುತ್ತದೆಂದು ಜರ್ದಾರಿ ವಿರುದ್ಧ ಅವರು ಆರೋಪ ಹೊರಿಸಿದರು. ಕರಾಚಿಯಿಂದ ಸಿಂಧ್ವರೆಗೆ ನಿಗದಿತ ಮೆರವಣಿಗೆಗೆ ಕೆಲವೇ ಗಂಟೆಗಳ ಮುಂಚೆ ನವಾಜ್ ಷರೀಫ್ ರೈವಿಂಡ್ನಲ್ಲಿ ಪಾಕಿಸ್ತಾನಕ್ಕೆ ಅಮೆರಿಕದ ರಾಯಭಾರಿಯಾದ ಅನ್ನೆ ಪ್ಯಾಟರ್ಸನ್ ಜತೆ ಮಾತುಕತೆ ನಡೆಸಿದರು. ಪಾಕಿಸ್ತಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಅಮೆರಿಕವನ್ನು ಚಿಂತೆಗೀಡುಮಾಡಿದ್ದು, ಮತ್ತಷ್ಟು ಅಸ್ಥಿರಪರಿಸ್ಥಿತಿ ಮೂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತಮ್ಮ ಹತ್ಯೆಗೆ ನಡೆಯುತ್ತಿರುವ ಪಿತೂರಿ ಬಗ್ಗೆ ವಿವರಿಸಿದ ನವಾಜ್ ಷರೀಫ್, ಇತ್ತೀಚೆಗೆ ಕೆಲವು ಶಕ್ತಿಗಳು ತಮ್ಮ ವಿರುದ್ಧ ಸಕ್ರಿಯವಾಗಿದ್ದಾಗಿ ಬಲ್ಲಮೂಲಗಳಿಂದ ತಿಳಿದುಬಂದಿದ್ದಾಗಿ ಷರೀಫ್ ತಿಳಿಸಿದರು. ಉನ್ನತ ದರ್ಜೆಯ ಸರ್ಕಾರಿ ಅಧಿಕಾರಿಗಳಿಂದ ತಮ್ಮ ಜೀವಕ್ಕೆ ಬೆದರಿಕೆ ಉಂಟಾಗಿದೆಯೆಂದು ಮೂಲಗಳು ಹೇಳಿರುವುದಾಗಿ ತಿಳಿಸಿದ ಷರೀಫ್ ಮತ್ತಷ್ಟು ವಿವರಗಳ ಬಹಿರಂಗಕ್ಕೆ ನಿರಾಕರಿಸಿದರು. |