ಸದ್ದಾಂ ಹುಸೇನ್ ಆಳ್ವಿಕೆಯಲ್ಲಿ ಮಾಜಿ ಉಪಪ್ರಧಾನಮಂತ್ರಿಯಾಗಿದ್ದ ತಾರಿಖ್ ಅಜೀಜ್ ಮತ್ತು ಸದ್ದಾಂ ಹುಸೇನ್ ಆಪ್ತಸಂಗಡಿಗ 'ಕೆಮಿಕಲ್ ಅಲಿ' ಹಸನ್ ಅಲ್-ಮಜೀದ್‌ಗೆ ಮಾನವ ಪೀಳಿಗೆಯ ವಿರುದ್ಧ ಅಪರಾಧಗಳಿಗಾಗಿ 15 ವರ್ಷಗಳ ಜೈಲು ಶಿಕ್ಷೆಯನ್ನು ಇರಾಕ್ ಉನ್ನತ ಕೋರ್ಟ್ ವಿಧಿಸಿದೆ.
1992ರಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಗ್ದಾದ್‌ನ 42 ವ್ಯಾಪಾರಿಗಳ ಹತ್ಯೆ ಕುರಿತು ಇರಾಕ್ ನ್ಯಾಯಮಂಡಳಿಯಲ್ಲಿ ವಿಚಾರಣೆ ಎದುರಿಸುತ್ತಿರುವ 8 ಜನರ ಪೈಕಿ ಅಜೀಜ್ ಮತ್ತು ಮಜೀದ್ ಸೇರಿದ್ದಾರೆ. ಆಗ ಇರಾಕ್ ಕುವೈಟ್ ಮೇಲೆ ಆಕ್ರಮಣ ನಡೆಸಿದ ಬಳಿಕ ವಿಶ್ವಸಂಸ್ಥೆ ದಿಗ್ಬಂಧನದ ಶಿಕ್ಷೆಗೆ ಗುರಿಯಾಗಿತ್ತು.
ಸದ್ದಾಂ ಸೋದರಸಂಬಂಧಿ ಮಜೀದ್ ವಿರುದ್ಧ 10 ವರ್ಷಗಳ ಹಿಂದೆ ಶಿಯಾ ಮುಸ್ಲಿಮರ ಕಗ್ಗೊಲೆ ನಡೆಸಿದ ಆರೋಪದ ಮೇಲೆ ಬಾಗ್ದಾದ್ ಕೋರ್ಟ್ ಮರಣದಂಡನೆಗೆ ಗುರಿಮಾಡಿದ ಹಿಂದೆಯೇ ಈ ತೀರ್ಪು ಹೊರಬಿದ್ದಿದೆ. ಆದಾಗ್ಯೂ, ಮಾನವಪೀಳಿಗೆಯ ವಿರುದ್ಧ ಅದೇ ರೀತಿಯ ಅಪರಾಧಗಳಿಗಾಗಿ ಕೋರ್ಟ್ ಅಜೀಜ್ ಅವರನ್ನು ದೋಷಮುಕ್ತಗೊಳಿಸಿತು. 1988ರ ಅನ್ಫಾಲ್ ಆಂದೋಳನದ ಸಂದರ್ಭದಲ್ಲಿ ಹತ್ತಾರು ಸಾವಿರ ಕುರ್ದಿಗಳ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಜೀದ್ ಸ್ವತಃ ಮರಣದಂಡನೆಗೆ ಗುರಿಯಾಗಿದ್ದನು. ಆಗ ಇರಾಕಿ ಪಡೆಗಳು ವಿಷಾನಿಲವನ್ನು ಗ್ರಾಮಗಳಿಗೆ ಸೋರಿಕೆ ಮಾಡಿದ್ದರಿಂದ ಸಾವಿರಾರು ಕುರ್ದಿಗಳು ಅಸುನೀಗಿದ್ದರಿಂದ ಕೆಮಿಕಲ್ ಅಲಿ ಎಂಬ ಅಡ್ಡಹೆಸರು ಮಜೀದ್‌ಗೆ ಅಂಟಿಕೊಂಡಿತು. ಮಾಜಿ ರಕ್ಷಣಾ ಮಂತ್ರಿ ಮತ್ತು ಸದ್ದಾಂ ಹುಸೇನ್ ಸೋದರ ಸಂಬಂಧಿಯಾದ ಕೆಮಿಕಲ್ ಅಲಿ ತಾನು ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪವನ್ನು ಇದುವರೆಗೆ ವ್ಯಕ್ತಪಡಿಸಿಲ್ಲ. |