ಪಾಕಿಸ್ತಾನದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾ ರ‌್ಯಾಲಿ ಗುರುವಾರ ಆರಂಭವಾಗಿದ್ದು, ಕರಾಚಿಯಲ್ಲಿ ಹೈಕೋರ್ಟ್ ಹೊರಗೆ ಪ್ರತಿಭಟನಾಕಾರರು ಪೊಲೀಸರಿಂದ ಲಾಠಿಏಟಿನ ರುಚಿ ತಿಂದರು. ಮಾಜಿ ಅಧ್ಯಕ್ಷ ಮುಷರಫ್ ವಜಾ ಮಾಡಿದ ನ್ಯಾಯಾಧೀಶರನ್ನು ಮರುನೇಮಕ ಮಾಡುವುದಾಗಿ ಅಧ್ಯಕ್ಷ ಜರ್ದಾರಿ ನೀಡಿದ್ದ ಭರವಸೆ ಈಡೇರಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.
ಆದರೆ ಸರ್ಕಾರ ಮಾತ್ರ ಈ ಮೆರವಣಿಗೆಯು ಸರ್ಕಾರವನ್ನು ಅಸ್ಥಿರಗೊಳಿಸುವ ಗುರಿಹೊಂದಿರುವುದಾಗಿ ಹೇಳುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿಪಕ್ಷದ 400 ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರದ ಎರಡು ದೊಡ್ಡ ಪ್ರಾಂತ್ಯಗಳಾದ ಪಂಜಾಬ್ ಮತ್ತು ಸಿಂಧ್‌ನಲ್ಲಿ ರಾಜಕೀಯ ಸಭೆ ನಡೆಸುವುದರಿಂದ ರಕ್ತಪಾತವಾಗಬಹುದೆಂಬ ಶಂಕೆಯ ಮೇಲೆ ಅಧಿಕಾರಿಗಳು ನಿಷೇಧ ವಿಧಿಸಿದ್ದಾರೆ.
ಸಿಂದ್ ಹೈಕೋರ್ಟ್ ಸಂಕೀರ್ಣದ ಹೊರಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ರಾಜಕೀಯ ಸಭೆಗೆ ನಿಷೇಧ ವಿಧಿಸಲಾಗಿದ್ದರೂ ಜಮಾತೆ ಇಸ್ಲಾಮಿ ಕಾರ್ಯಕರ್ತರು ಕೋರ್ಟ್ ಸಮೀಪ ಸುಳಿದಾಗ ಪೊಲೀಸರ ಜತೆ ಚಕಮಕಿ ನಡೆಯಿತು. ಪ್ರತಿಭಟನೆಕಾರರ ಮೇಲೆ ಪೊಲೀಸರು ಲಾಠಿಪ್ರಹಾರ ಮಾಡಿದ್ದಲ್ಲದೇ ಹತ್ತಾರು ಜನರನ್ನು ಬಂಧಿಸಿದರು. ರಾಜಕೀಯ ಸಭೆಗಳಿಗೆ ನಿಷೇಧವು ರಾಷ್ಟ್ರಾದ್ಯಂತ ರ‌್ಯಾಲಿಗಳಿಗೆ ಅಡ್ಡಿಪಡಿಸುವ ಯತ್ನವಾಗಿದೆಯೆಂದು ಕಾರ್ಯಕರ್ತರು ನಂಬಿದ್ದಾರೆ.
ಈ ಪ್ರತಿಭಟನೆಗಳಿಂದ ಪಾಕಿಸ್ತಾನದಲ್ಲಿ ಉದ್ವಿಗ್ನಕಾರಿ ಪರಿಸ್ಥಿತಿ ಮೂಡಿದೆ. "ಮೆರವಣಿಗೆ ಶಾಂತಿಯುತವಾಗಿರುತ್ತದೆ. ರಾಷ್ಟ್ರದ ವಕೀಲ ಸಮುದಾಯ ಇದಕ್ಕೆ ಕರೆ ನೀಡಿದ್ದು, ಈ ಮೆರವಣಿಗೆ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಖಂಡಿತವಾಗಿ ಉತ್ತೇಜನ ನೀಡುತ್ತದೆಂದು" ಷರೀಫ್ ಬಿಬಿಸಿಗೆ ತಿಳಿಸಿದ್ದಾರೆ. "ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿಲ್ಲದೇ ಪ್ರಜಾತಂತ್ರವೂ ಇರುವುದಿಲ್ಲ. ಏಕವ್ಯಕ್ತಿಗೆ ನಿಷ್ಠರಾಗಿರುವ ನ್ಯಾಯಾಧೀಶರು ನಮಗೆ ಅಗತ್ಯವಿಲ್ಲ. ರಾಷ್ಟ್ರಕ್ಕೆ ನಿಷ್ಠರಾಗಿರುವ ನ್ಯಾಯಾಧೀಶರು ನಮಗೆ ಬೇಕಾಗಿದೆ" ಎಂದು ಷರೀಫ್ ಹೇಳಿದ್ದಾರೆ. ಮುಷರಫ್ ಸಂವಿಧಾನದಲ್ಲಿ ಜಾರಿಗೆ ತಂದ ಎಲ್ಲ ತಿದ್ದುಪಡಿಗಳನ್ನು ರದ್ದುಮಾಡಿ ನೆಲದ ಕಾನೂನನ್ನು ಮತ್ತೆ ಜಾರಿಗೆ ತರುವುದನ್ನು ಬಯಸುವುದಾಗಿ ಅವರು ಹೇಳಿದರು. |