ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ತನ್ನ ಐದು ವರ್ಷದ ಆಡಳಿತಾವಧಿಯನ್ನು ಪೂರ್ಣಗೊಳಿಸಲು ಅಸಮರ್ಥರು ಎಂದು ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆಯ ನಡುವೆಯೇ ದೇಶಾದ್ಯಂತ ಸರಕಾರದ ವಿರುದ್ಧ ರ‌್ಯಾಲಿಗಳನ್ನು ನಡೆಸುತ್ತಿರುವ ಪ್ರಮುಖ ವಿರೋಧ ಪಕ್ಷ ಪಿಎಂಎಲ್-ಎನ್ ನಾಯಕ ನವಾಜ್ ಶರೀಫ್ ತಿಳಿಸಿದ್ದಾರೆ.
ಚುನಾವಣೆಗಳಿಗೆ ಸ್ಪರ್ಧಿಸದಂತೆ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತು ಅವರ ಸಹೋದರ ಶಹಬಾಜ್ ಶರೀಫ್ ಮೇಲೆ ಕೆಲ ಸಮಯದ ಹಿಂದೆ ಸರ್ವೋಚ್ಛ ನ್ಯಾಯಾಲಯ ನಿಷೇಧ ಹೇರಿತ್ತು. ಈ ಹಿನ್ನಲೆಯಲ್ಲಿ 2006ರಲ್ಲಿ ಪಿಎಂಎಲ್-ಎನ್ ಮತ್ತು ಆಡಳಿತಾರೂಢ ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ ಒಪ್ಪಿಕೊಂಡಿದ್ದ ಪ್ರಜಾಸತ್ತೆ ನಿಯಮಾವಳಿಗಳನ್ನು ಕಾರ್ಯಗತಗೊಳಿಸುವಂತೆ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯನ್ನು ಶರೀಫ್ ಒತ್ತಾಯಿಸಿದ್ದಾರೆ.
ಅಲ್ಲದೆ ಜರ್ದಾರಿಯವರು ನ್ಯಾಯಾಲಯಗಳ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಿದ್ದು, ತನ್ನ ಅಧಿಕಾರವಧಿಯನ್ನು ಪೂರ್ಣಗೊಳಿಸಲು ಅನರ್ಹರು ಎಂದು ಹೆಚ್ಚಿನ ವಿವರಗಳನ್ನು ತಿಳಿಸದೆ ಶರೀಫ್ ಟೀವಿ ವಾಹಿನಿ ಜತೆ ಮಾತನಾಡುತ್ತಾ ಆರೋಪಿಸಿದ್ದಾರೆ.
ತನ್ನನ್ನು ಹಾಗೂ ಸಹೋದರನನ್ನು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದ ನ್ಯಾಯಾಧೀಶರನ್ನು ಪಾಕಿಸ್ತಾನದ ಜನತೆ ನಂಬುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಕಟಕಿಯಾಡಿದ್ದು, 2007ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಜಾಗೊಳಿಸಲಾದ ನ್ಯಾಯಾಧೀಶರನ್ನು ಪ್ರಧಾನಿ ಗಿಲಾನಿ ಪುನರ್ ನೇಮಕ ಮಾಡುವಂತೆ ಕೇಳಿಕೊಂಡಿದ್ದಾರೆ. ಪ್ರಧಾನಿ ಆ ಕ್ರಮಕ್ಕೆ ಮುಂದಾದಲ್ಲಿ ಅವರಿಗೆ ಇಡೀ ದೇಶ ಬೆಂಬಲ ವ್ಯಕ್ತಪಡಿಸುತ್ತದೆ ಎಂದೂ ಅವರು ಸಲಹೆ ನೀಡಿದ್ದಾರೆ.
ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ವಜಾಗೊಳಿಸಿದ್ದ ನ್ಯಾಯಾಧೀಶರನ್ನು ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಬೃಹತ್ ರ‌್ಯಾಲಿಗೆ ಚಾಲನೆ ನೀಡಿರುವ ಶರೀಫ್ ಮತ್ತು ಅವರ ಪಕ್ಷಕ್ಕೆ ದೇಶಾದ್ಯಂತ ವಕೀಲರುಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಮಾರ್ಚ್ 16ರಂದು ಸಂಸತ್ ಭವನದ ಹೊರಗೆ ರಾಷ್ಟ್ಟದ ಹಿತಾಸಕ್ತಿ ಮೇರೆಗೆ ಬೃಹತ್ ರ‌್ಯಾಲಿ ಮತ್ತು ಪ್ರತಿಭಟನೆ ನಡೆಯಲಿದೆ ಎಂದು ಶರೀಫ್ ಘೋಷಿಸಿದ್ದಾರೆ.
ಈಗಾಗಲೇ ಸರಕಾರದ ವಿರುದ್ಧ ರ‌್ಯಾಲಿಯಲ್ಲಿ ಪಾಲ್ಗೊಂಡ ನೂರಾರು ವಕೀಲರೂ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಅಡಗಿಕೊಂಡಿದ್ದು, ಶರೀಫ್ ಬಂಧನಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಶರೀಫ್ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟುವುದಾಗಿ ಈಗಾಗಲೇ ಸರಕಾರ ಎಚ್ಚರಿಕೆ ನೀಡಿದೆ.
|