ಇಸ್ಲಾಮಾಬಾದ್: ಕುರ್ರಂ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕದ ಡ್ರೋನ್ ವಿಮಾನದಿಂದ ನಡೆಸಿರುವ ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಕುರ್ರಂ ಏಜೆನ್ಸಿಯ ಗ್ರಾಮವೊಂದರ ಮನೆಯ ಮೇಲೆ ಅಮೆರಿಕದ ಡ್ರೋನ್ ಕನಿಷ್ಠ ನಾಲ್ಕು ಕ್ಷಿಪಣಿಗಳನ್ನು ಪ್ರಯೋಗಿಸಿತು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಟಿವಿ ಚಾನೆಲ್ಗಳು ತಿಳಿಸಿವೆ.
ಸಾವುನೋವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ದಾಳಿಯಲ್ಲಿ 7 ಜನರು ಸತ್ತಿದ್ದಾರೆಂದು ಟಿವಿ ಚಾನೆಲ್ಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನೂರಾರು ಜನರು ಹತರಾದ ಶಿಯಾ ಮತ್ತು ಸುನ್ನಿ ಬುಡಕಟ್ಟು ಜನಾಂಗದ ನಡುವೆ ಜನಾಂಗೀಯ ಸಂಘರ್ಷಗಳಿಂದ ಕುರ್ರಂ ಏಜನ್ಸಿ ಇತ್ತೀಚೆಗೆ ಸುದ್ದಿಯಲ್ಲಿದೆ. ಸುನ್ನಿ ಬುಡಕಟ್ಟು ಜನರನ್ನು ಬೆಂಬಲಿಸಲು ತಾಲಿಬಾನ್ ಉಗ್ರಗಾಮಿಗಳು ಈ ಪ್ರದೇಶದೊಳಕ್ಕೆ ನುಸುಳುತ್ತಿರುವ ಬಗ್ಗೆ ವರದಿಯಾಗಿತ್ತು.
ಡ್ರೋನ್ ದಾಳಿಗಳು ಪ್ರತ್ಯುತ್ಪಾದಕ ಮತ್ತು ರಾಷ್ಟ್ರದ ಸಾರ್ವಬೌಮತೆಯ ಉಲ್ಲಂಘನೆಯೆಂದು ಇಸ್ಲಾಮಾಬಾದ್ ಪ್ರತಿಭಟನೆ ನಡೆಸುತ್ತಿದ್ದರೂ ಅಮೆರಿಕವು ಡ್ರೋನ್ ದಾಳಿಗಳನ್ನು ನಿಲ್ಲಿಸಿಲ್ಲ. ಬರಾಕ್ ಒಬಾಮಾ ಅಧಿಕಾರ ಸ್ವೀಕರಿಸಿದ ಬಳಿಕ ಸುಮಾರು 6ಕ್ಕಿಂತ ಹೆಚ್ಚು ಡ್ರೋನ್ ವಿಮಾನಗಳ ದಾಳಿ ನಡೆದಿವೆ. |