ಉತ್ತರಕೊರಿಯದ ಯೋಜಿತ ಉಪಗ್ರಹ ಉಡಾವಣೆಯನ್ನು ಜಪಾನ್ ತೀವ್ರವಾಗಿ ಪ್ರತಿಭಟಿಸಿದೆ. ಜಪಾನ್ ಮೇಲೆ ಉಪಗ್ರಹ ಉಡಾವಣೆಯಾಗಲಿದ್ದು, ಜಪಾನ್ ಕರಾವಳಿ ತೀರದಲ್ಲಿ ಅಪಾಯದ ವಲಯವನ್ನು ಯೋಂಗ್ಯಾಂಗ್ ಗುರುತಿಸಿರುವ ಹಿನ್ನೆಲೆಯಲ್ಲಿ ರಾಕೆಟ್‌ನ್ನು ಶೂಟ್ ಮಾಡಿ ಉರುಳಿಸುವುದಾಗಿ ಜಪಾನ್ ಎಚ್ಚರಿಸಿದೆ.
ವಿಶ್ವಸಂಸ್ಥೆ ಏಜೆನ್ಸಿಗಳಿಗೆ ಬಹು ಹಂತದ ರಾಕೆಟ್‌ನ ಭಾಗಗಳು ಬೀಳುವ ಎರಡು ವಲಯಗಳನ್ನು ಉತ್ತರಕೊರಿಯ ನೀಡಿದ್ದು, ಏಪ್ರಿಲ್ 4-8ರ ನಡುವೆ ಜಪಾನ್ ಮೇಲೆ ಫೆಸಿಫಿಕ್ ಸಾಗರದತ್ತ ರಾಕೆಟ್ಟನ್ನು ಉಡಾವಣೆ ಮಾಡುವ ಯೋಜನೆಯನ್ನು ಉತ್ತರ ಕೊರಿಯ ಪ್ರಕಟಿಸಿದೆ. ರಾಕೆಟ್‌ನ ಮೊದಲ ಹಂತ ಬೀಳುವುದೆಂದು ನಿರೀಕ್ಷಿಸಲಾಗಿರುವ ಅಪಾಯದ ವಲಯವನ್ನು ಜಪಾನ್ ವಾಯವ್ಯ ತೀರಕ್ಕೆ 75 ಕಿಮೀ ದೂರದ ಜಲಪ್ರದೇಶವೆಂದು ಗುರುತಿಸಲಾಗಿದೆ. ಇನ್ನೊಂದು ವಲಯವು ಪೆಸಿಫಿಕ್ ಮಧ್ಯದಲ್ಲಿ ಜಪಾನ್ ಮತ್ತು ಹವಾಯಿ ನಡುವೆಯಿದೆ.
ಟೋಕಿಯೊದಲ್ಲಿ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಟೇಕಿಯೊ ಕವಾಮುರಾ ರಾಕೆಟ್ ಯೋಜನೆ ಕೈಬಿಡುವಂತೆ ಉತ್ತರಕೊರಿಯಕ್ಕೆ ತಿಳಿಸಿದ್ದು, ಜಪಾನ್ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಎಚ್ಚರಿಸಿದೆ. ಜಪಾನ್‌ನತ್ತ ರಾಕೆಟ್‌ನ ಅವಶೇಷವು ಬಿದ್ದರೆ ನಾವು ಸುರಕ್ಷತೆ ಸಲುವಾಗಿ ಶೂಟ್ ಮಾಡುವುದಾಗಿ ಅವರು ತಿಳಿಸಿದ್ದಾರೆ. "ನಮ್ಮತ್ತ ಹಾರುವ ಯಾವುದೇ ವಸ್ತುವಾದರೂ ನಾವು ಅದನ್ನು ನಿಭಾಯಿಸುತ್ತೇವೆ ಮತ್ತು ಯಾವುದೇ ತುರ್ತುಪರಿಸ್ಥಿತಿ ಎದುರಿಸಲು ಸಿದ್ಧವಿರುವುದಾಗಿ" ಅವರು ಹೇಳಿದರು.
ಜಪಾನ್ ಪ್ರಧಾನಮಂತ್ರಿ ಕೂಡ ಉಪಗ್ರಹ ಹಾರಿಸುವ ಉತ್ತರಕೊರಿಯ ಯೋಜನೆಗೆ ಕೋಪ ವ್ಯಕ್ತಪಡಿಸಿದ್ದಾರೆ. "ಅದನ್ನು ಉಪಗ್ರಹ ಅಥವಾ ಏನನ್ನಾದರೂ ಕರೆಯಲಿ. ಯೋಂಗ್ಯಾಂಗ್ ಖಂಡಾಂತರ ಕ್ಷಿಪಣಿ ಚಟುವಟಿಕೆಯನ್ನು ನಿಷೇಧಿಸಿದ ವಿಶ್ವಸಂಸ್ಥೆಯ 2006ರ ಭದ್ರತಾ ಮಂಡಳಿ ನಿರ್ಣಯದ ಉಲ್ಲಂಘನೆ" ಎಂದು ತಾರಾ ಅಸೊ ತಿಳಿಸಿದರು. ಉಪಗ್ರಹ ಉಡಾವಣೆಯನ್ನು ರದ್ದು ಮಾಡುವಂತೆ ತಾವು ಆಗ್ರಹಿಸುವುದಾಗಿ ಅವರು ಹೇಳಿದರು. |