ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿನ ಅಂತ್ಯಕ್ಕೆ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸ್ಫಖ್ ಪರ್ವೇಜ್ ಕಯಾನಿ ಸಿದ್ದಪಡಿಸಿರುವ ರಾಜೀ ಸೂತ್ರವನ್ನು ಒಪ್ಪಿಕೊಳ್ಳಲು 24 ಗಂಟೆಗಳ ಗಡುವನ್ನು ಅಧ್ಯಕ್ಷ ಜರ್ದಾರಿಗೆ ಅಮೆರಿಕ ನೀಡಿದೆ. ಪಾಕಿಸ್ತಾನದ ರಾಜಕೀಯ ಗೊಂದಲ ತಿಳಿಗೊಳಿಸುವ ಒಪ್ಪಂದಕ್ಕೆ ಸಮ್ಮತಿಸಲು ಜರ್ದಾರಿ ವಿಫಲರಾದರೆ ಅಧಿಕಾರ ತ್ಯಜಿಸುವಂತೆ ಒಪ್ಪಂದದಲ್ಲಿ ಸೂಚಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಪ್ರಭಾವಶಾಲಿ ವಿದೇಶಿ ಶಕ್ತಿಗಳ ಜತೆ ಸಮಾಲೋಚಿಸಿ ಕಯಾನಿ ಮತ್ತು ಗಿಲಾನಿ ರೂಪಿಸಿರುವ ರಾಜಕೀಯ ಒಪ್ಪಂದ ಐದು ಷರತ್ತುಗಳನ್ನು ಬಿಚ್ಚಿಟ್ಟಿದೆ. ಒಪ್ಪಂದದ ಪ್ರಕಾರ, ಇಸ್ಲಾಮಾಬಾದ್‌ಗೆ ದೀರ್ಘ ಮೆರವಣಿಗೆ ನಿಗದಿಯಾಗಿರುವ ಮಾ.16ರೊಳಗೆ ರಾಜಕೀಯ ಬಿಕ್ಕಟ್ಟಿನ ಅಂತ್ಯಕ್ಕೆ ಅಗತ್ಯವಾದ ಉದಾರತೆ ತೋರಿಸುವಂತೆ ಜರ್ದಾರಿ ಮನವೊಲಿಸಲು ಗಿಲಾನಿ ಕಾಲವ್ಯರ್ಥಮಾಡಬಾರದು. ಜರ್ದಾರಿ ಒಪ್ಪಂದಕ್ಕೆ ಸಮ್ಮತಿಸದಿದ್ದರೆ, ಪಾಕಿಸ್ತಾನ ಸೇನೆ ಮತ್ತು ಅಂತಾರಾಷ್ಟ್ರೀಯ ಪಾತ್ರಧಾರಿಗಳು ಮೈನಸ್- ಒನ್ ಸೂತ್ರವನ್ನು ಪ್ರಯೋಗಿಸುತ್ತವೆ. ಆ ಸನ್ನಿವೇಶದಲ್ಲಿ ಜರ್ದಾರಿಯನ್ನು ಹುದ್ದೆಯಿಂದ ಪದಚ್ಯುತಗೊಳಿಸಿ ಪ್ರಧಾನಿ ಕಚೇರಿಗೆ ಅಧಿಕಾರ ನೀಡಲಾಗುವುದು ಮತ್ತು ಗಿಲಾನಿ ತಮ್ಮ ಪ್ರಭುತ್ವವನ್ನು ಮೆರೆಯಲಿದ್ದಾರೆ. ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ ಮತ್ತು ಮಾಜಿ ಸುಪ್ರೀಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಮರುನೇಮಕಗೊಳ್ಳಲಿದ್ದಾರೆ. ಒಪ್ಪಂದದ ಅನುಷ್ಠಾನಕ್ಕೆ ನೂತನ ವ್ಯವಸ್ಥೆಗೆ ಜರ್ದಾರಿಯನ್ನು ಮನವೊಲಿಸುವ ಜವಾಬ್ದಾರಿ ಗಿಲಾನಿ ಹೆಗಲಿಗೆ ಬಿದ್ದಿದೆ. ಪಿಪಿಪಿ ಮತ್ತು ಪಿಎಂಎಲ್(ಎನ್) ನಡುವೆ ಮಧುರ ಬಾಂಧವ್ಯಕ್ಕೆ ಕಂಟಕಪ್ರಾಯರಾಗಿರುವ ಪಂಜಾಬ್ ಗವರ್ನರ್ ಸಲ್ಮಾನ್ ತಸೀರ್‌ರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ನಿರ್ಧರಿಸಲಾಗಿದೆ. ಒಪ್ಪಂದವನ್ನು ರೂಪಿಸಲು ಮಾ.11ರಿಂದ ಅನೇಕ ಸಭೆಗಳನ್ನು ನಡೆಸಲಾಗಿದೆ. |