ಪಾಕಿಸ್ತಾನದ ಮಾಹಿತಿ ಖಾತೆ ಸಚಿವೆ ಶೆರಿ ರೆಹ್ಮಾನ್ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರ ರಾಜೀನಾಮೆಯನ್ನು ಅನುಮೋದಿಸಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ನಿಕಟವರ್ತಿಯಾಗಿದ್ದ ರೆಹ್ಮಾನ್‌ರಿಗೆ ಸರ್ಕಾರ ಮಾಧ್ಯಮವನ್ನು ನಿಭಾಯಿಸುತ್ತಿರುವ ರೀತಿಯನ್ನು ಕುರಿತು ಭಿನ್ನಾಭಿಪ್ರಾಯಗಳು ಉದ್ಭವಿಸಿದ್ದರಿಂದ ರಾಜೀನಾಮೆಯನ್ನು ಸಲ್ಲಿಸಿದ್ದಾರೆಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಟೆಲಿವಿಷನ್ ಚಾನೆಲ್‌ಗಳು ತಿಳಿಸಿವೆ. ಆದರೆ ಪ್ರಧಾನಮಂತ್ರಿ ಗಿಲಾನಿ ಅವರು ರೆಹ್ಮಾನ್ ರಾಜೀನಾಮೆಯನ್ನು ಅಂಗೀಕರಿಸಿಲ್ಲವೆಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಪ್ರಮುಖ ಉರ್ದು ಸುದ್ದಿ ಚಾನೆಲ್ ಜಿಯೊ ನ್ಯೂಸ್, ರಾಷ್ಟ್ರಾದ್ಯಂತ ಕೇಬಲ್ ಜಾಲದಿಂದ ತಮ್ಮ ಚಾನೆಲ್ಲನ್ನು ತೆಗೆದಿರುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ ರೆಹ್ಮಾನ್ ರಾಜೀನಾಮೆ ನೀಡಿದ ಬೆಳವಣಿಗೆ ಸಂಭವಿಸಿದೆ. ಅಧ್ಯಕ್ಷ ಜರ್ದಾರಿ ಆದೇಶದ ಮೇಲೆ ಹೀಗೆ ಮಾಡಲಾಗಿದೆ ಎಂದು ಚಾನೆಲ್ ಹೇಳಿದರೂ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ.
|