ಢಾಕಾದಲ್ಲಿ ಬಹುಮಹಡಿಯ ಶಾಪಿಂಗ್ ಸಂಕೀರ್ಣದಲ್ಲಿ ಭುಗಿಲೆದ್ದ ಅಗ್ನಿಅನಾಹುತಕ್ಕೆ ಬಲಿಯಾದವರ ಸಂಖ್ಯೆ ಏಳಕ್ಕೇರಿದ್ದು, ಕಟ್ಟಡದಿಂದ ಇನ್ನೂ 3 ದೇಹಗಳನ್ನು ಪತ್ತೆಹಚ್ಚಲಾಗಿದೆ. 11ನೇ ಮಹಡಿಯಿಂದ ಕಳೆದ ರಾತ್ರಿ ಇನ್ನೂ ಮೂರು ಶವಗಳು ಪತ್ತೆಯಾಗಿವೆ. ಗಾಯಗೊಂಡ ಕನಿಷ್ಠ 30 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ಅಗ್ನಿಶಾಮಕ ವಕ್ತಾರ ತಿಳಿಸಿದರು.
ಗಗನಚುಂಬಿ ಕಟ್ಟಡದ ಐದು ಮಹಡಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಬೆಂಕಿಯ ಕೆನ್ನಾಲಿಗೆಯು ಇನ್ನೂ ಎರಡು ಮಹಡಿಗಳಿಗೆ ಹಾನಿವುಂಟುಮಾಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ವಾಯುಪಡೆ ಹೆಲಿಕಾಪ್ಟರ್ಗಳು ಮತ್ತು ನೌಕಾಪಡೆಯ ಈಜುಗಾರರು ಅಗ್ನಿಶಾಮಕ ಪಡೆಗಳ ಜತೆ ಸೇರಿದ್ದಾರೆ. ಕಟ್ಟಡದ ಭದ್ರತೆ ಮತ್ತು ಅಗ್ನಿಶಾಮಕ ತಂಡಗಳ ನಡುವೆ ಸಮನ್ವಯತೆ ಕೊರತೆಯಿಂದ ಆಧುನಿಕ ಅಗ್ನಿಶಾಮಕ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಗ್ನಿಶಾಮಕ ಮುಖ್ಯ ಬ್ರಿಗೇಡಿಯರ್ ತಿಳಿಸಿದ್ದಾರೆ.
ಬೆಂಕಿಯನ್ನು ಹತೋಟಿಗೆ ತರಲು ಸೂಕ್ತ ಉಪಕರಣಗಳ ಕೊರತೆಯಿದೆ ಎಂದು ಗೃಹರಾಜ್ಯ ಸಚಿವ ತಾಂಜಿಮ್ ಅಹ್ಮದ್ ಸೊಹೆಲ್ ತಾಜ್ ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಪಡೆ ಸುಮಾರು 9 ಗಂಟೆಗಳನ್ನು ತೆಗೆದುಕೊಂಡಿತೆಂದು ತಿಳಿದುಬಂದಿದೆ. ಬೆಂಕಿಯನ್ನು ಇನ್ನೂ ಕಡಿಮೆ ಅವಧಿಯಲ್ಲಿ ಶಮನ ಮಾಡಬಹುದಿತ್ತು. ಆದರೆ ಅಗ್ನಿಶಾಮಕ ಸೇವೆಗೆ ಆಧುನಿಕ ಹೈಡ್ರಾಲಿಕ್ ಏಣಿಗಳು ಸೇರಿದಂತೆ ಸೂಕ್ತ ಉಪಕರಣದ ಕೊರತೆಯಿದೆ ಎಂದು ಇನ್ನೊಬ್ಬ ಹಿರಿಯ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
|