ಪ್ರಧಾನಮಂತ್ರಿ ಗಿಲಾನಿ ಮತ್ತು ಸೇನಾಮುಖ್ಯಸ್ಥ ಜನರಲ್ ಅಸ್ಫಖ್ ಪರ್ವೇಜ್ ಕಯಾನಿ ಸಿದ್ಧಪಡಿಸಿದ ಶಾಂತಿ ಒಪ್ಪಂದವನ್ನು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿರಸ್ಕರಿಸಿದ್ದಾರೆಂದು ವರದಿಯಾಗಿದ್ದು, ಪಾಕ್ ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಆಸೆ ಬತ್ತಿಹೋಗಿವೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಮುಹಮದ್ ಚೌಧರಿ ಅವರನ್ನೂ ಯಾವುದೇ ಕಾರಣಕ್ಕೂ ಮರುನೇಮಕ ಮಾಡಲು ಸಾಧ್ಯವಿಲ್ಲ ಎಂದು ಜರ್ದಾರಿ ಸ್ಪಷ್ಟಪಡಿಸಿದ್ದಾರೆ. ಉನ್ನತ ಮಟ್ಟದ ಅಧ್ಯಕ್ಷೀಯ ಸಭೆಯಲ್ಲಿ ಕಯಾನಿ ಮತ್ತು ಗಿಲಾನಿ ಸಿದ್ಧಪಡಿಸಿದ ಮರುಸಂಧಾನ ಸೂತ್ರವನ್ನು ಜರ್ದಾರಿ ಖಡಾಖಂಡಿತವಾಗಿ ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.ವಕೀಲರ ಪ್ರತಿಭಟನಾ ಮೆರವಣಿಗೆ ಹತ್ತಿಕ್ಕಲು ಮಾಧ್ಯಮದ ಮೇಲೆ ದಾಳಿ ಮಾಡಲು ಅಧ್ಯಕ್ಷರು ಆದೇಶ ನೀಡಿದ್ದಾರೆಂದು ಕೂಡ ಪಾಕ್ ಮಾಧ್ಯಮದಲ್ಲಿ ವರದಿಯಾಗಿವೆ. ಜರ್ದಾರಿಯನ್ನು ಮೂಲೆಗೆ ತಳ್ಳಿ, ಗಿಲಾನಿಗೆ ಮಹತ್ವ ನೀಡಲಾಗಿದೆಯೆಂದು ಇತ್ತೀಚಿನ ದಿನಗಳಲ್ಲಿ ಊಹಾಪೋಹಗಳು ದಟ್ಟವಾಗಿ ಹರಡಿವೆ. ಜರ್ದಾರಿಗೆ ರಾಷ್ಟ್ರದ ರಾಜಕೀಯ ಗೊಂದಲ ಶಮನಕ್ಕೆ 24 ಗಂಟೆಗಳ ಗಡುವನ್ನು ನೀಡಲಾಗಿದೆಯೆಂದು ಗುರುವಾರ ವರದಿಗಳು ಹೇಳಿದ್ದವು. |