ರಾಜಕೀಯ ಕಗ್ಗಂಟುಗಳ ನಡುವೆ ಪಾಕ್‌ನಲ್ಲಿ ಅತಂತ್ರ ಸ್ಥಿತಿ ಏರ್ಪಡುತ್ತಿರುವ ತನ್ಮಧ್ಯೆಯೇ ವಕೀಲರು ಹಾಗೂ ರಾಜಕೀಯ ಪ್ರಮುಖರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಂಗವಾಗಿ ಮಾಜಿ ಪ್ರಧಾನಿ, ಪ್ರಮುಖ ವಿರೋಧ ಪಕ್ಷವಾದ ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಗೃಹ ಬಂಧನಕ್ಕೆ ಪಾಕ್ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.ಭಾನುವಾರ ಬೆಳಿಗ್ಗೆ ಮಾಜಿ ಪ್ರಧಾನಿ ನವಾಜ್ ಷರೀಫ್, ಮಾಜಿ ಕ್ರಿಕೆಟಿಗ ಹಾಗೂ ರಾಜಕೀಯ ಮುಖಂಡ ಇಮ್ರಾನ್ ಖಾನ್ ಸೇರಿದಂತೆ ಹಲವು ಪ್ರಮುಖರ ಗೃಹ ಬಂಧನಕ್ಕೆ ಪಾಕ್ ಸರ್ಕಾರ ಆದೇಶ ಹೊರಡಿಸಿರುವುದಾಗಿ ಟಿವಿ ಚಾನೆಲ್‌ಗಳ ವರದಿಯ ಮೂಲಗಳು ಬಹಿರಂಗಪಡಿಸಿವೆ.ಆದರೆ ಈ ಬೆಳವಣಿಗೆ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ, ಏತನ್ಮಧ್ಯೆ ನವಾಜ್ ಷರೀಫ್ ಎಲ್ಲಿರುವರು ಎಂಬ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಷರೀಫ್ ಸೋದರ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಶಾಭಾಜ್ ಷರೀಫ್, ಇಂದು ಬೆಳಿಗ್ಗೆ ರಾವಲ್ಪಿಂಡಿ ತಲುಪಿದ್ದಾರೆ. ಶಾಭಾಜ್ ಅವರನ್ನು ಈ ಸಂದರ್ಭದಲ್ಲಿ ಗ್ಯಾರಿಸನ್ ನಗರದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.ಒಂದು ವೇಳೆ ನಾನು ಬಂಧಿಸಲ್ಪಟ್ಟರೆ ಅಥವಾ ಗೃಹಬಂಧನಕ್ಕೆ ಒಳಗಾದರೂ ಕೂಡ ತಾವು ಹೇಗಾದರು ಮಾಡಿ ಇಸ್ಲಾಮಾಬಾದ್ ಅನ್ನು ತಲುಪಿಕೊಳ್ಳಿ ಎಂದು ನವಾಜ್ ಕಳೆದ ರಾತ್ರಿ ತಮ್ಮ ನೂರಾರು ಬೆಂಬಲಿಗರಿಗೆ ಕರೆ ನೀಡಿದ್ದರು. |