ಪದಚ್ಯುತ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಮಹ್ಮದ್ ಚೌಧರಿ ಅವರನ್ನು ಮರುನೇಮಕ ಮಾಡಲಾಗುವುದು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಸೋಮವಾರ ಲಾಂಗ್ ಮಾರ್ಚ್ ಪ್ರತಿಭಟನೆಯನ್ನು ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ.
ಪ್ರಸಕ್ತ ಮುಖ್ಯನ್ಯಾಯಮೂರ್ತಿ ಡೋಗಾರ್ ನಿವೃತ್ತರಾದ ಬಳಿಕ ಮಾರ್ಚ್ 21ರಂದು ಇಫ್ತಿಕರ್ ಮರುನೇಮಕ ಮಾಡಲಾಗುವುದು ಎಂದು ಗಿಲಾನಿ ಹೇಳಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ಉಲ್ಬಣಿಸಿದ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಗೋಚರಿಸಿವೆ.
ನವಾಜ್ ಷರೀಫ್ ಅವರು ಮಂಡಿಸಿದ ಬಹುತೇಕ ಬೇಡಿಕೆಗಳಿಗೆ ಜರ್ದಾರಿ ಒಪ್ಪಿಕೊಂಡಿದ್ದಾರೆಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಹೇಳಿದ್ದಾರೆ.
ಕಳೆದ ವಾರದಿಂದ ಬಂಧಿಸಲಾದ ಎಲ್ಲ ರಾಜಕೀಯ ಕಾರ್ಯಕರ್ತರನ್ನು ಮತ್ತು ವಕೀಲರನ್ನು ಬಿಡುಗಡೆ ಮಾಡಲಾಗುವುದು ಎಂದು ಗಿಲಾನಿ ಆದೇಶ ನೀಡಿದ್ದಾರೆ. ಜರ್ದಾರಿ ಜತೆ ರಾಜೀ ಸೂತ್ರವನ್ನು ರೂಪಿಸಲಾಗಿದೆ ಎಂದೂ ಅವರು ಹೇಳಿದರು. ಪಿಪಿಪಿ ಮತ್ತು ಪ್ರತಿಪಕ್ಷ ಪಿಎಂಎಲ್-ಎನ್ ನಡುವೆ ಇಫ್ತಿಕರ್ ಮರುನೇಮಕಾತಿ ಕುರಿತು ರಾಜಕೀಯ ಬಿಕ್ಕಟ್ಟು ಭುಗಿಲೆದ್ದಿದ್ದರಿಂದ ಗಿಲಾನಿ ಮತ್ತು ಜರ್ದಾರಿ ತಡರಾತ್ರಿಯಲ್ಲಿ ನಿರ್ಣಾಯಕ ಚರ್ಚೆ ನಡೆಸಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. |