ಬ್ರಿಟನ್ ರಾಜಕುವರರಾದ ವಿಲಿಯಂ ಮತ್ತು ಹ್ಯಾರಿ ಅವರ ಹತ್ಯೆಗೆ ಐಆರ್‌ಎ ಭಯೋತ್ಪಾದಕರು ಪಿತೂರಿ ನಡೆಸಿದ್ದಾರೆಂಬ ಶಂಕೆಯಿಂದ ರಾಜಕುವರರಿಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವ ರಾಜಕುವರರ ಮೇಲೆ ಐರೀಷ್ ರಿಪಬ್ಲಿಕನ್ ಆರ್ಮಿ ಗುರಿಯಿ ಇರಿಸಿದೆಯೆಂದು ಶಂಕಿಸಲಾಗಿದ್ದು, ಪ್ರತಿಯೊಂದು ಪಾಳಿಯಲ್ಲಿ ಇಬ್ಬರು ರಾಜಕುವರರನ್ನು ಕಾಯುವ ರಕ್ಷಣಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಬ್ರಿಟನ್ ಸಂಡೇ ಎಕ್ಸ್‌ಪ್ರೆಸ್ ತಿಳಿಸಿದೆ.
ಉತ್ತರ ಐರ್ಲೆಂಡ್‌ನಲ್ಲಿ ಇಬ್ಬರು ಸೈನಿಕರ ಹತ್ಯೆ ಬಳಿಕ ಬೆದರಿಕೆ ಮಟ್ಟ ಮೇಲ್ದರ್ಜೆಗೇರಿದೆ. ಈ ಉನ್ಮತ್ತ ವ್ಯಕ್ತಿಗಳು ರಾಜಕುವರರನ್ನು ಕಾನೂನುಬದ್ಧ ಗುರಿ ಎಂದು ಪರಿಗಣಿಸಿದ್ದಾರೆ. ರಾಜಮನೆತನದ ರಕ್ಷಣಾಧಿಕಾರಿಗಳ ಸಂಖ್ಯೆಯನ್ನು ಇಬ್ಬರಿಂದ ಮೂವರಿಗೆ ಹೆಚ್ಚಿಸಲಾಗಿದ್ದು, ಇಬ್ಬರ ಬೆಂಬಲಿತ ತಂಡದೊಂದಿಗೆ ಬಲ ಹೆಚ್ಚಿಸಲಾಗಿದೆಯೆಂದು ಭದ್ರತಾ ಮೂಲಗಳು ಹೇಳಿವೆ.
ರಾಜಕುವರರ ವಿರುದ್ಧ ಬೆದರಿಕೆ ಪರಮಾವಧಿಗೆ ಮುಟ್ಟಿದ್ದರೂ ವಿಲಿಯಂ ಮತ್ತು ಹ್ಯಾರಿ ಸಾಧ್ಯವಾದಷ್ಟು ಸಹಜತೆಯಿಂದ ಜೀವಿಸಲು ಬಯಸಿರುವುದು ರಾಜಕುವರರ ಅಂಗರಕ್ಷಕರು ಮತ್ತು ಭದ್ರತಾ ಸಂಸ್ಥೆಗಳಿಗೆ ಕಳವಳ ಉಂಟುಮಾಡಿದೆ. |