ಮರದಿಂದ ಹಣ್ಣು ಕದಿಯುತ್ತಿದ್ದದ್ದು ಮಂಗ ಎಂದು ತಿಳಿದುಕೊಂಡ ವ್ಯಕ್ತಿಯೊಬ್ಬ, ಮಹಿಳೆಗೆ ಗುಂಡು ಹಾರಿಸಿದ ಘಟನೆಯೊಂದು ಮಲೇಷ್ಯಾದಿಂದ ವರದಿಯಾಗಿದೆ.
ನೆರೆಮನೆಯ ಮಹಿಳೆಯೊಬ್ಬಾಕೆ ತೋಟದಿಂದ ಸಪೋಟ ತೆಗೆಯುತ್ತಿದ್ದಾಗ ಆರೋಪಿಯು ಮಂಗ ಎಂದು ಭಾವಿಸಿ ನೇರವಾಗಿ ಗುರಿಯಿಟ್ಟು ಗುಂಡು ಹೊಡೆದಿದ್ದ. ಗುಂಡು ತಗುಲಿದ ಆಕೆಯ ಚೀರಾಟ ಕೇಳಿ ಇದು ತಮ್ಮ ನೆರೆಮನೆಯ ಮಹಿಳೆ ಎಂಬುದು ಆತನಿಗೆ ತಿಳಿಯಿತು ಎಂದು ಪೂರ್ವ ಪಹಾಂಗ್ ರಾಜ್ಯದ ಪೊಲೀಸ್ ಮುಖ್ಯಸ್ಥ ಯಹಾಯಾ ಒತ್ಮನ್ ತಿಳಿಸಿದ್ದಾರೆ.
ಆರೋಪಿಯು ಕೆಲಸದಿಂದ ಮನೆಗೆ ಮರಳಿದ್ದ. ಆಗ ಮರದಲ್ಲಿ ಏನೋ ಶಬ್ದವಾಗಿತ್ತು. ಬಂದೂಕು ಕೈಗೆತ್ತಿಕೊಂಡು ಆತ ಗುಂಡು ಹಾರಿಸಿದ. ಹೊಟ್ಟೆಗೆ ಗುಂಡು ತಗುಲಿದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಯಂಸೇವಾ ಭದ್ರತಾ ಪಡೆಗೆ ಸೇರಿರುವ ಈ ವ್ಯಕ್ತಿಯ ಬಗ್ಗೆ ತನಿಖೆ ನಡೆಯುತ್ತಿದೆ. ಬಂದೂಕನ್ನು ಅಕ್ರಮವಾಗಿ ಬಳಸಿದ ಆರೋಪ ಸಾಬೀತಾದರೆ ಆತನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. |