ಪೂರ್ವ ಆಪ್ಘಾನಿಸ್ತಾನದಲ್ಲಿ ರಸ್ತೆ ಬದಿಯ ಬಾಂಬ್ ದಾಳಿಗೆ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆಂದು ನ್ಯಾಟೊ ನೇತೃತ್ವದ ಇಸಾಫ್ ಶಾಂತಿಪಾಲನಾ ಪಡೆ ದೃಢಪಡಿಸಿದೆ. ಸೈನಿಕರಿದ್ದ ವಾಹನ ಚಲಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿತೆಂದು ವರದಿಗಳು ತಿಳಿಸಿವೆ.
ಈ ಸ್ಫೋಟಕ್ಕೆ ತಾನೇ ಕಾರಣವೆಂದು ತಾಲಿಬಾನ್ ಉಗ್ರರು ಹೇಳಿದ್ದಾರೆ. ಈ ವರ್ಷ ಸುಮಾರು 60 ವಿದೇಶಿ ಸೈನಿಕರು ಉಗ್ರಗಾಮಿಗಳ ಭಯೋತ್ಪಾದನೆಗೆ ಬಲಿಯಾಗಿದ್ದು, ಅವರಲ್ಲಿ ಬಹುತೇಕ ಮಂದಿಯನ್ನು ತಾವೇ ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ನ್ಯಾಟೊ ಗಸ್ತುಪಡೆಯ ಮೇಲೆ ಕಾಬೂಲ್‌ನಲ್ಲಿ ಪ್ರತ್ಯೇಕ ಆತ್ಮಾಹುತಿ ದಾಳಿಯೊಂದರಲ್ಲಿ ಇಬ್ಬರು ದಾರಿಹೋಕರು ಮೃತಪಟ್ಟಿದ್ದಾರೆ. ಪೇಶಾವರದ ಹೊರವಲಯದಲ್ಲಿ ನ್ಯಾಟೊ ಪೂರೈಕೆ ಟ್ರಕ್‌ಗಳ ನಿಲ್ದಾಣದಲ್ಲಿ ಆವರಿಸಿದ್ದ ಬೆಂಕಿಯನ್ನು ಪಾಕಿಸ್ತಾನ ಅಗ್ನಿಶಾಮಕ ಪಡೆ ನಂದಿಸಿತು.
ಆತ್ಮಾಹುತಿ ದಾಳಿಯಲ್ಲಿ 14 ನಾಗರಿಕರು ಗಾಯಗೊಂಡಿದ್ದು, ಯಾವುದೇ ವಿದೇಶಿ ಪಡೆಗಳು ಗಾಯಗೊಂಡಿಲ್ಲ ಅಥವಾ ಹತ್ಯೆಯಾಗಿಲ್ಲ. ಕಂದಹಾರ್ ನಗರದ ಮೇಯರ್ ಕೂಡ ಬಾಂಬ್ ದಾಳಿಯಿಂದ ಪಾರಾಗಿದ್ದಾರೆ. ಒಬ್ಬ ದಾರಿಹೋಕ ಸತ್ತಿದ್ದು 6 ಮಂದಿ ಗಾಯಗೊಂಡಿದ್ದಾರೆ. ಕಂದಹಾರ್ ಮೇವಾಂಡ್ ಜಿಲ್ಲೆಯಲ್ಲಿ ಅಮೆರಿಕ ಮತ್ತು ಆಫ್ಘಾನ್ ಪಡೆಗಳು ಒಳಗೊಂಡ ಕಾರ್ಯಾಚರಣೆಯಲ್ಲಿ ಐವರು ಉಗ್ರಗಾಮಿಗಳು ಹತರಾಗಿದ್ದಾರೆ. |