ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಮರುನೇಮಕ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದ್ದು, ಗಂಭೀರ ಸಂಘರ್ಷವನ್ನು ಶಮನಗೊಳಿಸುವ ಮತ್ತು ರಾಷ್ಟ್ರೀಯ ಸಾಮರಸ್ಯದತ್ತ ಗಣನೀಯ ಹೆಜ್ಜೆ ಎಂದು ಹೇಳಿದೆ.
'ಗಂಭೀರ ಸಂಘರ್ಷವನ್ನು ತಿಳಿಗೊಳಿಸುವ ಮುತ್ಸದ್ಧಿತನದ ನಿರ್ಧಾರ ಮತ್ತು ದೀರ್ಘಾವಧಿ ನೆನೆಗುದಿಗೆ ಬಿದ್ದ ವಿವಾದ ಪರಿಹಾರವು ರಾಷ್ಟ್ರೀಯ ಸಾಮರಸ್ಯದತ್ತ ಗಣನೀಯ ಹೆಜ್ಜೆ' ಎಂದು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ಎಲ್ಲ ಪಾಕಿಸ್ತಾನಿಯರು ಮತ್ತು ಅವರ ರಾಜಕೀಯ ಪ್ರತಿನಿಧಿಗಳು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತ್ತು ಸಕಾರಾತ್ಮಕ ಮಾತುಕತೆ ಖಾತ್ರಿಗೆ ಒಟ್ಟುಗೂಡಿ ಕೆಲಸ ಮಾಡಲು ಈಗ ಸಮಯ ಕೂಡಿಬಂದಿದೆ ಎಂದು ಅದು ಹೇಳಿದೆ.
ಪಾಕಿಸ್ತಾನದಲ್ಲಿ ವಜಾಗೊಂಡ ನ್ಯಾಯಾಧೀಶರ ಮರುನೇಮಕಕ್ಕೆ ಒತ್ತಾಯಿಸಿ ನವಾಜ್ ಷರೀಫ್ ಕರೆನೀಡಿದ್ದ ಮಾಹಾಯಾತ್ರೆಯಿಂದ ಅಧ್ಯಕ್ಷ ಜರ್ದಾರಿ ಮತ್ತು ನವಾಜ್ ಷರೀಫ್ ನಡುವೆ ಬಿಕ್ಕಟ್ಟು ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ನಾಯಕ ನವಾಜ್ ಷರೀಫ್ ಜತೆ ಬಿಕ್ಕಟ್ಟಿನ ಶಮನಕ್ಕೆ ಅಧ್ಯಕ್ಷ ಜರ್ದಾರಿ ಮೇಲೆ ಅಮೆರಿಕ ಭಾರೀ ಒತ್ತಡ ಹೇರಿತ್ತು.
|