ಕೆನಡಾದ ಕಾಲ್ಗೇರಿ ನಗರಕ್ಕೆ ಮಂಗಳವಾರ ಭೇಟಿ ನೀಡಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು, 8 ವರ್ಷಗಳ ಅಧಿಕಾರ ಪೂರೈಸಿದ ನೆನಪಿಗಾಗಿ ಖಾಸಗಿ ಉಪನ್ಯಾಸ ನೀಡಲು ಅಲ್ಲಿಗೆ ಭೇಟಿ ನೀಡಲಿರುವ ಬುಷ್ ಅವರು ನಗರ ಸಮಾವೇಶ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸವನ್ನು ಅಡ್ಡಿಪಡಿಸುವುದಾಗಿ ಪ್ರತಿಭಟನೆಕಾರರು ತಿಳಿಸಿದ್ದಾರೆ.
ಬುಷ್ ಅವರನ್ನು ಸ್ವಾಗತಿಸುವ ಬದಲಿಗೆ ಕೆನಡಾಗೆ ಇಳಿಯುತ್ತಿದ್ದಂತೆ ಅವರಿಗೆ ಕೈಕೋಳ ಹಾಕಬೇಕೆಂದು ಪ್ರತಿಭಟನಾ ನಾಯಕರು ಒತ್ತಾಯಿಸಿದ್ದಾರೆ. ಗೌಂಟನಾಮೊ ನೆಲೆಯ ಶಿಬಿರದಲ್ಲಿ ಯುದ್ಧಕೈದಿಗಳಿಗೆ ಚಿತ್ರಹಿಂಸೆ ನೀಡಿದ ಆರೋಪಕ್ಕಾಗಿ ಬುಷ್‌ಗೆ ಕೆನಡಾ ಪೊಲೀಸರು ಕೈಕೋಳ ಹಾಕುವುದು ಸೂಕ್ತವೆಂದು ಅವರು ಹೇಳಿದ್ದಾರೆ.
ಯುದ್ಧದ ಕ್ರಿಮಿನಲ್‌ನನ್ನು ಕೆನಡಾ ಆಹ್ವಾನಿಸಬಾರದು ಎಂದು ಪ್ರತಿಭಟನೆಕಾರರ ನಾಯಕ ತಿಳಿಸಿದ್ದಾರೆ. ಯುದ್ಧಾಪರಾಧಗಳಿಗಾಗಿ ಬುಷ್ ರಾಷ್ಟ್ರದೊಳಕ್ಕೆ ಕಾಲಿಡದಂತೆ ತಡೆಯಬೇಕೆಂದು ರಾಯಲ್ ಕೆನಡಾ ಪೊಲೀಸರಿಗೆ ಕೆಲವು ವಕೀಲರು ಕೂಡ ಪತ್ರಬರೆದಿದ್ದಾರೆಂದು ತಿಳಿದುಬಂದಿದೆ.
ಯುದ್ಧಪರಾಧಗಳಿಗಾಗಿ ಅವರನ್ನು ಹೊಣೆಯಾಗಿಸಲು ಸ್ಥಳದಲ್ಲಿ ಬುಷ್‌ಗೆ ಅಣಕು ವಿಚಾರಣೆಯನ್ನು ಕೂಡ ನಡೆಸಲು ಪ್ರತಿಭಟನೆಕಾರರು ಯೋಜಿಸಿದ್ದಾರೆ. ಜನವರಿಯಲ್ಲಿ ಅಧಿಕಾರ ತ್ಯಜಿಸಿದ ಬುಷ್ ಅಮೆರಿಕ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅನುಮೋದನೆ ರೇಟಿಂಗ್ ಗಳಿಸಿದ್ದು, ಕೆನಡಾದಲ್ಲಿ ಅತೀ ಅಹಿತಕಾರಿ ನಾಯಕರೆನಿಸಿದ್ದಾರೆ. |