ಮಿಲಿಟರಿ ಆಡಳಿತಗಾರನ ವಿರುದ್ಧ ಸೆಟೆದೆದ್ದು ವಿಜಯಿಯಾದ ಏಕೈಕ ನ್ಯಾಯಮೂರ್ತಿ ಎಂದು ಹೆಗ್ಗಳಿಕೆಗೆ ಪಾತ್ರರಾದ ಇಫ್ತಿಕರ್ ಮಹಮದ್ ಚೌಧರಿ ಮಾ.21ರಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸ್ಥಾನದಲ್ಲಿ ಆಸೀನರಾಗಲಿದ್ದು, ಇದೊಂದು ರೀತಿಯ ಸಾಹಸಿ ಪುನರಾಗಮನದ ಕಥೆಯಂತಿದೆ.
ಮುಷರಫ್ ಆದೇಶದಂತೆ ರಾಜೀನಾಮೆ ನೀಡಲು ನಿರಾಕರಿಸುವ ಮೂಲಕ ಮಿಲಿಟರಿ ಅಧ್ಯಕ್ಷರ ವಿರುದ್ಧ ಸೆಟೆದುನಿಂತ 60 ವರ್ಷ ವಯಸ್ಸಿನ ಚೌಧರಿ ಪಾಕಿಸ್ತಾನದಲ್ಲಿ ಅತ್ಯಂತ ಚಿರಪರಿಚಿತ ವ್ಯಕ್ತಿ. ಅಮಾನತು ಶಿಕ್ಷೆ ಮತ್ತು ವಜಾಗೆ ಗುರಿಯಾದ ಏಕೈಕ ನ್ಯಾಯಾಧೀಶರಾದ ಅವರು ನಾಟಕೀಯ ಬೆಳವಣಿಗೆಗಳ ನಂತರ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಪುನರಾಗಮನವಾಗಿದೆ.
ಮುಷರಫ್ ಅವರನ್ನು 2005ರ ಮೇ 7ರಂದು ಪಾಕ್ ಮುಖ್ಯನ್ಯಾಯಮೂರ್ತಿಯಾಗಿ ನೇಮಕಮಾಡಿದ್ದರೂ, ಆಗಿನಿಂದ ಮುಷರಫ್ ಜತೆ ಸುದೀರ್ಘ ಸಂಘರ್ಷದಲ್ಲೇ ನಿರತರಾಗಿದ್ದರು. ಅದಕ್ಕಾಗಿ ಅವರು 2007, ಮಾ.9ರಂದು ಅಮಾನತಿನ ಶಿಕ್ಷೆಗೆ ಗುರಿಯಾದರು. 2007ಜುಲೈನಲ್ಲಿ ಈ ನಿರ್ಧಾರವನ್ನು ಸುಪ್ರೀಂಕೋರ್ಟ್ ಬದಲಿಸಿತು. ಆದರೆ ಮುಷರಫ್ 2007 ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿದಾಗ ತಮ್ಮ ಮರುಆಯ್ಕೆ ವಿರುದ್ಧ ಕೋರ್ಟ್ ತೀರ್ಪಿನ ಮುನ್ಸೂಚನೆ ಸಿಕ್ಕಿ, ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದ್ದಲ್ಲದೇ ತುರ್ತುಪರಿಸ್ಥಿತಿ ಘೋಷಿಸುವ ಮೂಲಕ ಚೌಧರಿಯನ್ನು ವಜಾ ಮಾಡಿದರು.
ಆದರೆ ಇದಕ್ಕೆ ಮಣಿಯದ ಚೌಧರಿ, 7 ಸದಸ್ಯರ ಪೀಠವನ್ನು ಕರೆದು, ತುರ್ತುಪರಿಸ್ಥಿತಿ ವಿರುದ್ಧ ಮಧ್ಯಂತರ ಕ್ರಮವನ್ನು ಅಂಗೀಕರಿಸಿದರು. ಏತನ್ಮಧ್ಯೆ, ಜರ್ದಾರಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ತಮ್ಮ ವಿರುದ್ಧ ಭ್ರಷ್ಟಾಚಾರ ಪ್ರಕರಣ ಕೈಗೆತ್ತಿಕೊಳ್ಳುವ ಭಯದಿಂದ ವಜಾಗೊಂಡ ಇಫ್ತಿಕರ್ ಮರುನೇಮಕದ ಭರವಸೆಯನ್ನು ಕೈಬಿಟ್ಟರು.
ವಜಾಗೊಂಡ ನ್ಯಾಯಾಧೀಶರ ಮರುನೇಮಕಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ನವಾಜ್ ಷರೀಫ್ ಬೃಹತ್ ಮೆರವಣಿಗೆಯನ್ನು ಆಯೋಜಿಸಿದಾಗ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿತು. ಅಮೆರಿಕ ಮುಂತಾದ ರಾಷ್ಟ್ರಗಳ ಒತ್ತಡದ ಹಿನ್ನೆಲೆಯಲ್ಲಿ ಅಂತಿಮವಾಗಿ ಜರ್ದಾರಿ ಶರಣಾಗಿ, ಇಫ್ತಿಕರ್ ಮರುನೇಮಕ ಪ್ರಕಟಿಸಿದರು. ಅನ್ಯಾಯದ ವಿರುದ್ಧ ಇಫ್ತೀಕರ್ ಹೋರಾಟಕ್ಕೆ ಕೊನೆಗೂ ಜಯಸಿಕ್ಕಿತು.
|