ಸೇವೆಯಿಂದ ವಜಾಗೊಂಡಿದ್ದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧುರಿ ಅವರನ್ನು ಮರುನೇಮಕ ಮಾಡಬೇಕೆಂಬ ವಿರೋಧ ಪಕ್ಷದ ನಾಯಕ ನವಾಜ್ ಷರೀಫ್ ಅವರ ಬೇಡಿಕೆಗೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಮಣಿಯುವ ಮೂಲಕ ದುರ್ಬಲ ಅಧ್ಯಕ್ಷ ಎಂಬುದು ಸಾಬೀತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುದ್ದೆಯಿಂದ ವಜಾಗೊಂಡಿರುವ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಅವರನ್ನು ಮರುನೇಮಕ ಮಾಡಬೇಕೆಂದು ಆಗ್ರಹಿಸಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಲಾಹೋರ್‌ನಲ್ಲಿ ಬಲಪ್ರದರ್ಶನ ಮಾಡಿ ಧಮಕಿ ಹಾಕಿತ್ತು. ಪ್ರತಿಭಟನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹಲವು ಪ್ರಮುಖರನ್ನು ಸರ್ಕಾರ ಗೃಹಬಂಧನದಲ್ಲಿ ಇರಿಸಿತ್ತು.
ಕೊನೆಗೂ ನವಾಜ್ ಅವರ ಅವಾಜ್‌ಗೆ ಬೆದರಿದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ವಿಧಿ ಇಲ್ಲದೆ, ಮಾರ್ಚ್ 21ರಂದು ಇಫ್ತಿಕರ್ ಚೌಧುರಿಯನ್ನು ಮರುನೇಮಕ ಮಾಡಲಾಗುವುದು ಎಂದು ಘೋಷಿಸಿದ್ದರು.
ಈ ನೂತನ ಬೆಳವಣಿಗೆಯಿಂದ ಪಾಕ್ ಅಧ್ಯಕ್ಷ ಜರ್ದಾರಿ ಅತ್ಯಂತ ದುರ್ಬಲ ಎಂಬಂತಾಗಿದೆ. ಇದು ನಿಜಕ್ಕೂ ಜನಸಾಮಾನ್ಯರು ಸೇರಿದಂತೆ ಸ್ವತಃ ಅವರ ಪಕ್ಷದವರೇ ಒಪ್ಪಿಕೊಳ್ಳುವ ವಿಷಯವಲ್ಲ ಎಂದು ಪಾಕಿಸ್ತಾನದ ಪ್ರಮುಖ ರಾಜಕೀಯ ಹಾಗೂ ರಕ್ಷಣಾ ವಿಶ್ಲೇಷಕ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ತಾಲತ್ ಮಸೂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |