ಪ್ರತಿಪಕ್ಷಗಳ ಜತೆ ಸಂಘರ್ಷದ ಪರಿಹಾರಕ್ಕೆ ಜರ್ದಾರಿ ಸರ್ಕಾರ ಕೈಗೊಂಡಿರುವ ಕ್ರಮಗಳು ರಾಜಕೀಯ ಸಾಮರಸ್ಯಕ್ಕೆ ಪ್ರಥಮ ಹೆಜ್ಜೆಯಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮಂಗಳವಾರ ತಿಳಿಸಿದ್ದಾರೆ.
ಒಪ್ಪಿಕೊಂಡ ನಿರ್ಣಯವು ನಾಗರಿಕ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಲ್ಲಿ ಸ್ಥಿರತೆ ಉಂಟುಮಾಡಬಹುದಾದ ರಾಜಕೀಯ ಅಭಿಪ್ರಾಯಗಳ ರಾಜಿ ಮತ್ತು ಸಾಮರಸ್ಯಕ್ಕೆ ಪ್ರಥಮ ಹೆಜ್ಜೆ ಎಂದು ವಿದೇಶಾಂಗ ಇಲಾಖೆಯ ಮುಖ್ಯಕಚೇರಿಯಲ್ಲಿ ಕ್ಲಿಂಟನ್ ತಿಳಿಸಿದರು.
ಪಾಕಿಸ್ತಾನವು ಆಳವಾದ ರಾಜಕೀಯ ಬಿಕ್ಕಟ್ಟಿನಲ್ಲಿ ಮುಳುಗಿದಂತೆ ಕಂಡುಬಂದಾಗ, ಕ್ಲಿಂಟನ್ ಪಾಕ್ ಅಧ್ಯಕ್ಷ ಜರ್ದಾರಿ, ಪ್ರಧಾನಿ ಗಿಲಾನಿ ಮತ್ತು ಪ್ರತಿಪಕ್ಷದ ನಾಯಕ ನವಾಜ್ ಷರೀಫ್ ಅವರಿಗೆ ದೂರವಾಣಿ ಮಾಡಿದ್ದರು.
ಮಾತುಕತೆ ಮತ್ತು ಅಹಿಂಸಾತ್ಮಕ ರೀತಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇತ್ಯರ್ಥ ಮಾಡಿಕೊಳ್ಳುವಂತೆ ವಿದೇಶಾಂಗ ಇಲಾಖೆ ಮತ್ತು ಕ್ಲಿಂಟನ್ ಹಿತವಚನ ನುಡಿದಿದ್ದರು.
ರಾಜಕೀಯ ಬಿಕ್ಕಟ್ಟಿನಿಂದ ಪಾಕ್ ಸರ್ಕಾರ ಹೊರಬರಲು ತಾವು ಪಾತ್ರವಹಿಸಿದ್ದಾಗಿ ಒಪ್ಪಿಕೊಂಡ ಕ್ಲಿಂಟನ್ 'ತಾವು ಅಧ್ಯಕ್ಷ ಜರ್ದಾರಿ ಮತ್ತು ನವಾಜ್ ಷರೀಫ್ ಜತೆ ಮಾತುಕತೆ ನಡೆಸಿದ್ದಾಗಿ ಹೇಳಿದರು. ನಾಗರಿಕ ಪ್ರಜಾಪ್ರಭುತ್ವದ ಸ್ಥಿರತೆ ಮತ್ತು ಕಾನೂನಿನ ಆಡಳಿತವು ಉಗ್ರವಾದ ಮತ್ತು ಹಿಂಸಾಚಾರ ನಿವಾರಣೆಗೆ ಅವಶ್ಯಕವಾಗಿದೆ ಎಂದು ಕ್ಲಿಂಟನ್ ಹೇಳಿದ್ದಾರೆ. |