ಆಫ್ರಿಕಾಕ್ಕೆ ಐತಿಹಾಸಿಕ ಭೇಟಿ ನೀಡಿರುವ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್, ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಏಡ್ಸ್ ಸಾಂಕ್ರಾಮಿಕ ರೋಗಕ್ಕೆ ಕಾಂಡೋಮ್‌ಗಳು ಮದ್ದಲ್ಲ, ಆದರೆ ಅವುಗಳು ರೋಗವನ್ನು ಮತ್ತಷ್ಟು ಬಿಗಡಾಯಿಸುತ್ತವೆ ಎಂದು ಅವರು ಹೇಳಿದ್ದಾರೆ.
ಈ ಮಾರಣಾಂತಿಕ ರೋಗ ಹರಡುವುದನ್ನು ತಡೆಯಲು ವ್ಯಾಟಿಕನ್, ಲೈಂಗಿಕ ಚಟುವಟಿಕೆ ವರ್ಜನೆಯನ್ನು ಉತ್ತೇಜಿಸುತ್ತದೆ.
ಕೆಮರೂನ್‌ಗೆ ತೆರಳುವ ಹಾದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪೋಪ್ ಬೆನೆಡಿಕ್ಟ್ ಅವರು, 'ಏಡ್ಸ್ ಎಂಬ ದುರಂತವನ್ನು ಕೇವಲ ಹಣದಿಂದ ಜಯಿಸಲಾಗದು. ಅಥವಾ ಕಾಂಡೋಮ್ ವಿತರಣೆಯಿಂದ ಇದನ್ನು ತಡೆಯುವುದೂ ಅಸಾಧ್ಯ. ಯಾಕೆಂದರೆ ಕಾಂಡೋಮ್ ಈ ಸಮಸ್ಯೆಯನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತದೆ' ಎಂದು ಹೇಳಿರುವುದಾಗಿ ದಿ ಟೈಮ್ಸ್ ಮಂಗಳವಾರ ವರದಿ ಮಾಡಿದೆ.
ವಿವಾಹೋತ್ತರ ಸಂಬಂಧದಲ್ಲಿ ಪರಿಶುದ್ಧತೆ ಮತ್ತು ದಾಂಪತ್ಯ ನಿಷ್ಠೆ ಎಂಬ ಚರ್ಚ್‌ನ ಪಾರಂಪರಿಕ ಸಿದ್ಧಾಂತವು ಏಡ್ಸ್ ಅಥವಾ ಎಚ್ಐವಿ ಪ್ರಸರಣೆ ತಡೆಯಲು ಏಕೈಕ ಖಚಿತ ಮಾರ್ಗ ಎಂದು ಶ್ರುತಪಟ್ಟಿದೆ ಎಂದು ಪೋಪ್ ಈ ಹಿಂದೆ ಹೇಳಿಕೆ ನೀಡಿದ್ದರು.
ಆಫ್ರಿಕಾದಲ್ಲಿ ಏಡ್ಸ್ ತೀವ್ರ ಸ್ವರೂಪದಲ್ಲಿ ಮಹಾ ಮಾರಿಯಾಗಿ ಬೆಳೆದಿದ್ದು, ಅಲ್ಲಿ ಕ್ರೈಸ್ತ ಸನ್ಯಾಸಿನಿಯರು ಮತ್ತು ಸಮಾಜ ಸೇವಕರು ಏಡ್ಸ್ ರೋಗಿಗಳಿಗೆ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಪ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಎರಡು ವರ್ಷಗಳ ಹಿಂದೆ ವ್ಯಾಟಿಕನ್ ಕಾಂಡೋಮ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬಹುದು ಎಂಬ ಬಗ್ಗೆ ಊಹಾಪೋಹಗಳಿದ್ದವು. |