ವಾರಗಳ ಕಾಲದ ಅರಾಜಕತೆಗೆ ತುತ್ತಾದ ಹಿಂದುಮಹಾಸಾಗರದ ದ್ವೀಪ ಮಡಗಾಸ್ಕರ್ ಅಧ್ಯಕ್ಷ ಮಂಗಳವಾರ ಮಿಲಿಟರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ.
ರೇಡಿಯೊ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಾರ್ಕ್ ರಾವಲೋಮನಾನ ಮಿಲಿಟರಿಗೆ ಅಧಿಕಾರ ಹಸ್ತಾಂತರಿಸುವುದಾಗಿ ನುಡಿದರು. ತೀವ್ರ ಆಲೋಚನೆಯ ಬಳಿಕ ಸರ್ಕಾರವನ್ನು ವಿಸರ್ಜಿಸಿ ಅಧಿಕಾರ ತ್ಯಜಿಸುವ ಮೂಲಕ ಮಿಲಿಟರಿ ನಿರ್ದೇಶನಾಲಯ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಅವರು ಹೇಳಿದರು.
ಈ ನಿರ್ಧಾರವು ಅತ್ಯಂತ ಕಠಿಣ ಮತ್ತು ಕಷ್ಟವೆಂದು ಅವರು ಹೇಳಿದ್ದಾರೆ. ರಾವಲೊಮನಾನ ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಮಡಗಾಸ್ಕರ್‌ನಲ್ಲಿ ಪ್ರಜಾಪ್ರಭುತ್ವ ಕುಂಠಿತಗೊಳಿಸಿದ್ದಾರೆಂದು ಪ್ರತಿಪಕ್ಷದ ನಾಯಕ ಆಂಡ್ರಿ ರಾಜೋಲಿನ ಆರೋಪಿಸಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ಹಮ್ಮಿಕೊಂಡಿದ್ದರು.
ವಾರಗಳ ಕಾಲ ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿದ ಅವರಿಂದ ಅಧ್ಯಕ್ಷರ ಕ್ರಮಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮಿಲಿಟರಿ ನಿರ್ದೇಶನಾಲಯವು ರಾಷ್ಟ್ರೀಯ ಸಮಾವೇಶ ಆಯೋಜಿಸಿ 2 ವರ್ಷಗಳಲ್ಲಿ ಚುನಾವಣೆನಡೆಸುತ್ತದೆಂದುರಾವಲೋಮನಾನಾ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಪರಿವರ್ತನೆ ಸರ್ಕಾರದ ಅಧ್ಯಕ್ಷರೆಂದು ಸ್ವತಃ ಘೋಷಿಸಿಕೊಂಡಿದ್ದ ರಾಜೊಲಿನಾ ಎರಡು ವರ್ಷಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು. |