ಆಫ್ಘನ್ ವಲಯದಲ್ಲಿ ಸ್ಥಿರತೆ ಮತ್ತು ಭದ್ರತೆ ಮೂಡಿಸಲು ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರಗಾಮಿಗಳ ಸುರಕ್ಷಿತ ತಾಣಗಳನ್ನು ನಾಶಮಾಡಬೇಕೆಂದು ಆಫ್ಘಾನಿಸ್ತಾನದಲ್ಲಿ ನಿಯೋಜಿತರಾದ ಅಮೆರಿಕದ ಉನ್ನತ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.
ಗಡಿಯಾಚೆ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಬೀಡುಬಿಟ್ಟಿರುವ ಉಗ್ರರ ನೆಲೆಗಳನ್ನು ನಿರ್ಮೂಲನೆ ಮಾಡುವ ತನಕ ಸ್ಥಿರತೆ ಮತ್ತು ಭದ್ರತೆ ಮೂಡಿಸುವುದು ಕಷ್ಟ ಎಂದು ಆಫ್ಘಾನಿಸ್ತಾನದಲ್ಲಿ ಅಮೆರಿಕದ ಕಮಾಂಡರ್ ಡೇವಿಡ್ ಮೆಕ್ಕೀರನ್ ಪಿಬಿಎಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಜತೆ ಮಾತುಕತೆ ಕುರಿತು ಪ್ರಶ್ನಿಸಿದಾಗ, ಉಗ್ರಗಾಮಿಗಳು ಶಸ್ತ್ರಾಸ್ತ್ರ ತ್ಯಜಿಸಲು ಬಯಸಿದರೆ ಮತ್ತು ಆಫ್ಘಾನಿಸ್ತಾನದ ಕಾನೂನುಬದ್ಧ ಸಂವಿಧಾನವನ್ನು ಬೆಂಬಲಿಸಿದರೆ ಐಎಸ್‌ಎಎಫ್ ಮತ್ತು ಅಮೆರಿಕ ಮಿಲಿಟರಿ ಈ ನಿಲುವಿಗೆ ಪ್ರಾಶಸ್ತ್ಯ ನೀಡುತ್ತದೆ ಹಾಗೂ ಆಫ್ಘಾನಿಸ್ತಾನದ ನೇತೃತ್ವದಲ್ಲಿ ಅದು ಕಾನೂನುಬದ್ಧ ಸಂಧಾನ ಎಂದು ಅವರು ಹೇಳಿದ್ದಾರೆ.
ಈ ಯುದ್ಧದಲ್ಲಿ ಜಯಗಳಿಸುವ ಬಗ್ಗೆ ಅಮೆರಿಕ ಎಂದಾದರೂ ಯೋಚಿಸಿದೆಯೇ ಎನ್ನುವುದು ಖಚಿತವಿಲ್ಲ. 2001ರಲ್ಲಿ ನಮ್ಮ ರಾಷ್ಟ್ರದ ಮೇಲೆ ದಾಳಿ ಮಾಡಿದ ಅಲ್ ಖೈದಾ ಕಾರ್ಯಕರ್ತರು ಹೊರಹೊಮ್ಮಿದ್ದು ಈ ವಲಯದಿಂದಲೇ ಎಂದು ಹೇಳಿದ ಅವರು, ಅಲ್ ಖೈದಾ ಈ ಪ್ರದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ನುಡಿದರು. |