ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಸಂಭವಿಸಿದ ಸಿಪಾಯಿ ದಂಗೆಯಲ್ಲಿ ಸೇನಾಮುಖ್ಯಸ್ಥ ಮೇ.ಜನರಲ್ ಶಕೀಲ್ ಅಹ್ಮದ್ ಮತ್ತು 55 ಸೇನಾಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮೂವರು ಬಿಡಿಆರ್ ಸೈನಿಕರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸೆಲ್‌ನಲ್ಲಿ ಕಾರ್ಯಪಡೆ ತನಿಖೆಗೆ ಒಳಗಾಗಿರುವ ಇತರೆ ದಂಗೆಕೋರರು ಮೂವರು ಆರೋಪಿ ಸೈನಿಕರನ್ನು ಗುರುತಿಸಿದ್ದಾರೆ. ತನಿಖೆಯ ವೇಳೆಯಲ್ಲಿ ಆರಂಭಿಕ ಶೂಟರ್‌ಗಳ ಹೆಸರನ್ನು ಇದುವರೆಗೆ ಯಾರೂ ಬಹಿರಂಗಪಡಿಸಿರಲಿಲ್ಲ ಎಂದು ಹತ್ಯಾಕಾಂಡದ ತನಿಖೆ ಹೊಣೆ ವಹಿಸಲಾದ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಫೆ.25-26ರಂದು ಸೈನಿಕ ದಂಗೆಯು ಢಾಕಾದ ಬಿಡಿಆರ್ ಮುಖ್ಯಕಚೇರಿಯಲ್ಲಿ ಸಂಭವಿಸಿತ್ತು. ಸೈನಿಕರು ಕಡಿಮೆ ವೇತನ ಮತ್ತು ಕಳಪೆ ಉದ್ಯೋಗ ಸ್ಥಿತಿಗತಿ ವಿರುದ್ಧ ಬಂಡಾಯವೆದ್ದಿದ್ದರಿಂದ ಅನೇಕ ಮಂದಿ ಸೇನಾಧಿಕಾರಿಗಳು ಬಲಿಯಾಗಿದ್ದರು. ಬಾಂಗ್ಲಾದೇಶ ಸೇನೆ ದಾಳಿಗೆ ಸಜ್ಜಾದ ಬಳಿಕ ದಂಗೆ ಸಮಾಪ್ತಿಯಾಗಿತ್ತು.
ದಂಗೆಯಲ್ಲಿ ಸುಮಾರು 650 ಸೈನಿಕರು ಪಾಲ್ಗೊಂಡಿದ್ದರೆಂದು ತನಿಖೆದಾರರು ತಿಳಿಸಿದ್ದು, ವಿಡಿಯೊ ಚಿತ್ರಣದ ಪರೀಕ್ಷೆ, ಬಂಧಿತ ಪಡೆಗಳ ತನಿಖೆ ಮತ್ತು ಬದುಕುಳಿದ ಅಧಿಕಾರಿಗಳು ಮತ್ತು ಅವರ ಕುಟುಂಬದವರ ಹೇಳಿಕೆ ಆಧರಿಸಿ ಈ ದಂಗೆಕೋರರನ್ನು ಗುರುತಿಸಲಾಗಿದೆ. |