ಪಾಕಿಸ್ತಾನದಲ್ಲಿ ಆವರಿಸಿದ್ದ ಅರಾಜಕತೆ ಶಮನಗೊಂಡಿದ್ದು, ರಾಷ್ಟ್ರೀಯ ಸಾಮರಸ್ಯಕ್ಕಾಗಿ ಎಲ್ಲ ಪಕ್ಷಗಳನ್ನು ಜತೆಯಲ್ಲಿ ಕರೆದೊಯ್ಯುವುದಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಆಡಳಿತಾರೂಢ ಪಿಪಿಪಿ ಮತ್ತು ನವಾಜ್ ಷರೀಫ್ ಪಿಎಂಎಲ್-ಎನ್ ನಡುವೆ ಮತ್ತೊಮ್ಮೆ ಹೊಸ ಮೈತ್ರಿಯ ಸಾಧ್ಯತೆಯ ಬಗ್ಗೆ ಅವರು ಸುಳಿವು ನೀಡಿದರು.
ವಜಾಗೊಂಡ ನ್ಯಾಯಾಧೀಶರ ಮರುನೇಮಕ ಸೇರಿದಂತೆ ಷರೀಫ್ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ ಬಳಿಕ ರಾಜಕೀಯ ಬಿಕ್ಕಟ್ಟು ಶಮನಗೊಂಡ ಮರುದಿನವೇ ಗಿಲಾನಿ ಮಾತನಾಡುತ್ತಾ, ಪಂಜಾಬ್ ಪ್ರಾಂತ್ಯದಲ್ಲಿ ಗವರ್ನರ್ ಆಡಳಿತಕ್ಕೆ ತಾವು ವಿರೋಧಿಯಾಗಿದ್ದು, ಅದನ್ನು ಆದಷ್ಟುಬೇಗ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ ಸಾಮರಸ್ಯ ಮೂಡಿಸಲು ಎಲ್ಲ ರಾಜಕೀಯ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಸರ್ಕಾರ ಬಯಸಿದೆ ಎಂದು ಇಸ್ಲಾಮಾಬಾದ್ ಶಾಲೆಯಲ್ಲಿ ನಡೆದ ಸಮಾರಂಭದ ನೇಪಥ್ಯದಲ್ಲಿ ಅವರು ಮಾತನಾಡುತ್ತಾ ವರದಿಗಾರರಿಗೆ ತಿಳಿಸಿದರು.
ಪಿಎಂಎಲ್-ಎನ್ ಅಧಿಕಾರದಲ್ಲಿದ್ದಾಗ, ಪಂಜಾಬ್‌ನಲ್ಲಿ ಗವರ್ನರ್ ಆಡಳಿತವನ್ನು ಜರ್ದಾರಿ ಜಾರಿಗೆ ತಂದಿದ್ದು ರಾಜಕೀಯ ಬಿಕ್ಕಟ್ಟು ಭುಗಿಲೇಳಲು ಕಾರಣವಾಗಿತ್ತು. ತೀರ್ಪಿನ ವಿರುದ್ಧ ಸರ್ಕಾರ ಪರಾಮರ್ಶೆ ಅರ್ಜಿ ಸಲ್ಲಿಸುವುದಾಗಿ ಗಿಲಾನಿ ಪ್ರಕಟಿಸಿದ ಬಳಿಕ ಈ ಬಿಕ್ಕಟ್ಟು ಶಮನಗೊಂಡಿದೆ.
2007ರ ತುರ್ತುಪರಿಸ್ಥಿತಿ ಕಾಲದಲ್ಲಿ ಪದಚ್ಯುತರಾದ ನ್ಯಾಯಾಧೀಶರನ್ನು ಕೂಡ ಮರುನೇಮಕ ಮಾಡುವುದಾಗಿ ಅವರು ಹೇಳಿದ್ದಾರೆ. ಪಿಪಿಪಿಯು ಪಿಎಂಎಲ್-ಎನ್ ಜತೆ ಹೊಸ ಮೈತ್ರಿ ರಚಿಸುವ ಸಾಧ್ಯತೆ ಕುರಿತು ಪ್ರಶ್ನಿಸಿದಾಗ, ರಾಜಕೀಯ ದಿನನಿತ್ಯದ ವ್ಯವಹಾರವಾಗಿದ್ದು, ಇಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವೆಂದು ನುಡಿದರು. |