ಹಿಮದಲ್ಲಿ ಜಾರುವ ಸ್ಕೀಯಿಂಗ್ ಅಪಘಾತದಲ್ಲಿ ತಲೆಗುಂಟಾದ ಗಾಯಗಳಿಂದ ಬ್ರಿಟನ್ ನಟಿ ನಟಾಶಾ ರಿಚರ್ಡ್‌ಸನ್ ಅಸುನೀಗಿದ್ದಾರೆ. ನಟಿ ವನೀಸಾ ರೆಡ್‌ಗ್ರೇವ್ ಪುತ್ರಿಯಾದ 45ರ ಪ್ರಾಯದ ರಿಚರ್ಡ್‌ಸನ್ ಕೆನಡಾದ ಮಾಂಟ್ ಟ್ರೆಂಬ್ಲೆಂಟ್ ವಿಹಾರಧಾಮದ ಹಿಮದ ಇಳಿಜಾರಿನಲ್ಲಿ ಬಿದ್ದು ಗಾಯಗೊಂಡಿದ್ದರು.
ಕ್ವಿಬೆಕ್ ವಿಹಾರಧಾಮದಲ್ಲಿ ನಟಿ ಸ್ಕೀಯಿಂಗ್ ಅಭ್ಯಾಸ ಮಾಡುವಾಗ ಈ ಅಪಘಾತ ಸಂಭವಿಸಿದೆಯೆಂದು ಹೇಳಲಾಗಿದೆ. ಆರಂಭದಲ್ಲಿ ರಿಚರ್ಡ್‌ಸನ್ ಗಾಯಗೊಂಡ ಯಾವುದೇ ಲಕ್ಷಣ ತೋರಿಸಲಿಲ್ಲವಾದರೂ ಒಂದು ಗಂಟೆಯ ಬಳಿಕ ಆಕೆಯನ್ನು ಅಸ್ವಸ್ಥತೆಯಿಂದ ಸಮೀಪದ ಆಸ್ಪತ್ರೆಗೆ ಸೇರಿಸಿದಾಗ ಆಕೆ ತಲೆಗೆ ಗಂಭೀರ ಗಾಯಗೊಂಡಿದ್ದು ಪತ್ತೆಯಾಗಿದೆ.
ಐರಿಷ್ ನಟ 56ರ ಪ್ರಾಯದ ನೀಸನ್ ತಮ್ಮ ಪತ್ನಿಗೆ ಅಪಘಾತವುಂಟಾದ ಸುದ್ದಿ ಕೇಳಿದ ಕೂಡಲೇ ಟೊರೊಂಟೊದಲ್ಲಿ ಹೊಸ ಚಿತ್ರದ ಚಿತ್ರೀಕರಣವನ್ನು ಬಿಟ್ಟು ಪತ್ನಿಯ ಜತೆ ಕಲೆತರು. ಕೆನಡಾದಿಂದ ನ್ಯೂಯಾರ್ಕ್ ಲೆನಾಕ್ಸ್ ಹಿಲ್ ಆಸ್ಪತ್ರೆಗೆ ತೆರಳಿದ ರಿಚರ್ಡ್‌ಸನ್ ಅವರನ್ನು ನೀಸನ್ ಕೂಡ ಜತೆಗೂಡಿದ್ದರು.
ಲಿಯಾಮ್ ನೀಸನ್, ಅವರ ಮಕ್ಕಳು ಮತ್ತು ಇಡೀ ಕುಟುಂಬ ತಮ್ಮ ಪ್ರೀತಿಪಾತ್ರರಾದ ನಟಾಶಾ ದುರಂತ ಸಾವಿನಿಂದ ಆಘಾತಕ್ಕೀಡಾಗಿದೆ ಎಂದು ನೀಸನ್ ಪ್ರಚಾರಕ ಅಲನ್ ನೈರೋಬ್ ತಿಳಿಸಿದ್ದಾರೆ. ರಿಚರ್ಡ್‌ಸನ್ ಚಲನಚಿತ್ರಗಳು ಮತ್ತು ಟಿವಿ ಚಿತ್ರಗಳಲ್ಲಿ ಪಾತ್ರವಹಿಸಿದ್ದರೂ ನಾಟಕದ ಪಾತ್ರಗಳಿಗೆ ಮನ್ನಣೆ ಗಳಿಸಿದ್ದರು.ರೆಡ್‌ಗ್ರೇವ್ ನಟನಾ ಮನೆತನದ ಭಾಗವಾದ ಅವರು ರೆಡ್‌ಗ್ರೇವ್ ಮತ್ತು ನಿರ್ದೇಶಕ ಟೋನಿ ರಿಚರ್ಡ್‌ಸನ್ ಪುತ್ರಿಯಾಗಿದ್ದಾರೆ.
ರಿಚರ್ಡಸನ್ ತನ್ನ ವೃತ್ತಿಜೀವನದ ಆರಂಭದಲ್ಲೇ ಸ್ವತಃ ತನ್ನ ಕಾಲ ಮೇಲೆ ನಿಲ್ಲಬೇಕೆಂಬ ನಿರ್ಧಾರದಿಂದ ಲಂಡನ್ ತ್ಯಜಿಸಿ ವೆಸ್ಟ್ ಯಾರ್ಕ್‌ಶೈರ್ ನಾಟಕಮಂದಿರದಲ್ಲಿ ಪಾತ್ರವಹಿಸಲಾರಂಭಿಸಿದರು. ವೇದಿಕೆಯ ಮೇಲೆ ಅವರದ್ದು ದೇದಿಪ್ಯಮಾನ ಉಪಸ್ಥಿತಿಯಾಗಿದ್ದರೆ ವೇದಿಕೆಯ ಹಿಂದೆ ನಾಚಿಕೆಯ ಸ್ವಭಾವದ, ವಿವಾದ ಬಯಸದ ವ್ಯಕ್ತಿಯಾಗಿದ್ದರು.
|