ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿ 6 ವರ್ಷಗಳು ಗತಿಸಿದ್ದು, ಯುದ್ದದ ಕಾರ್ಮೋಡ ಅಂತ್ಯಗೊಳ್ಳುವಂತೆ ಕಾಣುತ್ತಿದೆ. ಆದರೆ ಅಮೆರಿಕ ಪಡೆಗಳು ವಾಪಸಾಗಿ ಇರಾಕಿ ಪಡೆಗಳು ಭದ್ರತೆಯನ್ನು ಕೈಗೆ ತೆಗೆದುಕೊಂಡ ಮರುಕ್ಷಣವೇ ಇರಾಕ್ ಅಪಾಯದ ಅಗ್ನಿಕುಂಡಕ್ಕೆ ಸಿಲುಕುವಂತೆ ಕಾಣುತ್ತಿದೆ.
2008ರಿಂದೀಚೆಗೆ ಸಾವಿನ ಸಂಖ್ಯೆಯಲ್ಲಿ ನಾಟಕೀಯ ಇಳಿಮುಖ ಕಂಡ ಬಳಿಕ, ಸುಸೂತ್ರ ಪರಿವರ್ತನೆಗೆ ಎಲ್ಲವೂ ಸಿದ್ಧವಾಗಿದೆಯೆಂದು ಅಮೆರಿಕ ಮತ್ತು ಇರಾಕ್ ಅಧಿಕಾರಿಗಳು ಮೇಲಿಂದ ಮೇಲೆ ಭರವಸೆ ನೀಡಿದ್ದರು. ಆದರೆ ಎರಡು ಪ್ರಮುಖ ಬಾಂಬ್ ಸ್ಫೋಟಗಳಲ್ಲಿ 60ಕ್ಕೂ ಹೆಚ್ಚು ಮಂದಿ ಬಲಿಯಾದ ಬಳಿಕ, 2003ರ ಅಮೆರಿಕ ಆಕ್ರಮಣದ ಮಾ.20ರ ವಾರ್ಷಿಕೋತ್ಸವಕ್ಕೆ ಮುನ್ನಾ ಕವಿದಿರುವ ಅಪಾಯಗಳ ಬಗ್ಗೆ ಭೀಭತ್ಸವಾಗಿ ನೆನಪಿಸುತ್ತದೆ.
ಕೇವಲ 3 ತಿಂಗಳಲ್ಲಿ ಅಮೆರಿಕ ಪಡೆಗಳು ಪ್ರಮುಖ ನಗರಗಳಿಂದ ಮತ್ತು ಪಟ್ಟಣಗಳಿಂದ ವಾಪಸಾಗಬೇಕಿದೆ. ಅಮೆರಿಕ ಪಡೆಗಳ ವಾಪಸಾತಿಯಿಂದ ಕ್ರಮೇಣ ಇರಾಕ್ ಪಡೆಗಳು ಜವಾಬ್ದಾರಿ ವಹಿಸಿಕೊಂಡು ಸಾಕಷ್ಟು ಸ್ಥಿರತೆ ಮೂಡುತ್ತದೆಂದು ಅಮೆರಿಕ ಮಿಲಿಟರಿ ಭಾವಿಸಿದೆ. ಜನಾಂಗೀಯ ಸಂಘರ್ಷ ಅಥವಾ ಆಂತರಿಕ ಯುದ್ಧದ ಭೀತಿಯನ್ನು ಮಿಲಿಟರಿ ತಳ್ಳಿಹಾಕಿದೆ.
ಆದರೆ ಬಾಗ್ದಾದ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟವು ಹೊಸ ಕಳವಳಕ್ಕೆ ನಾಂದಿಯಾಗಿದ್ದು, ಸಮಗ್ರ ಭದ್ರತಾ ಪರಾಮರ್ಶೆಗೆ ಕರೆ ನೀಡುತ್ತದೆ. ಬಾಂಬ್ ಸ್ಫೋಟವು ಕೇವಲ ಸಣ್ಣ ಘಟನೆಯೆಂದು ಪ್ರಧಾನಿ ನುರಿ ಅಲ್-ಮಾಲ್ಕಿ ಅವರ ಭರವಸೆಗಳಿಗೆ ಇದು ವಿರುದ್ಧವಾಗಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದಾಳಿಯು ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ಲೋಪವನ್ನು ತೋರಿಸಿದ್ದು, ಅದರ ಪರಾಮರ್ಶೆ ಅಗತ್ಯವಾಗಿದೆ ಎಂದು ಉಪಾಧ್ಯಕ್ಷ ತಾರೆಖ್ ಅಲ್-ಹಶೇಮಿ ತಿಳಿಸಿದ್ದಾರೆ. |