ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ನೇತೃತ್ವದ ಸರ್ಕಾರವು ಅಧ್ಯಕ್ಷರ ಪರಮಾಧಿಕಾರಗಳನ್ನು ರದ್ದುಮಾಡಿ 1999ರ ಅಕ್ಟೋಬರ್‌ನಲ್ಲಿ ಸೇನಾಕ್ರಾಂತಿಯ ಮೂಲಕ ಮಿಲಿಟರಿ ಅಧಿಕಾರವನ್ನು ಕೈವಶ ಮಾಡಿಕೊಂಡ ಸಂದರ್ಭದ ಪೂರ್ವಸ್ಥಿತಿಗೆ ಸಂವಿಧಾನವನ್ನು ಮರುಸ್ಥಾಪಿಸಬೇಕೆಂದು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಆಗ್ರಹಿಸಿದ್ದಾರೆ.
2007ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ವಜಾಗೊಂಡ ನ್ಯಾಯಾಧೀಶರ ಮರುನೇಮಕಕ್ಕೆ ಪಿಪಿಪಿ ವಿರುದ್ಧ ಭಾರೀ ಪ್ರತಿಭಟನೆ ಮೂಲಕ ಬಲಪ್ರಯೋಗ ಮಾಡಿದ ಷರೀಫ್, ತಮ್ಮನ್ನು ಮತ್ತು ಸೋದರ ಶಾಬಾಜ್ ವಿರುದ್ಧ ಚುನಾವಣೆಗೆ ನಿಲ್ಲದಂತೆ ನಿಷೇಧಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಸರ್ಕಾರ ಪರಾಮರ್ಶಿಸಬೇಕು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯನ್ನು ವಜಾ ಮಾಡಿ ಸಂಸತ್ತನ್ನು ವಿಸರ್ಜಿಸುವುದಕ್ಕೆ ಅಧ್ಯಕ್ಷರಿಗೆ ಅಧಿಕಾರ ನೀಡುವ ಸಂವಿಧಾನದ 17ನೇ ತಿದ್ದುಪಡಿಯನ್ನು ಸರ್ಕಾರ ರದ್ದುಮಾಡಬೇಕು ಎಂದು ಅವರು ನುಡಿದರು.
ಮಾಜಿ ಮಿಲಿಟರಿ ಆಡಳಿತಗಾರ ಮುಷರಫ್ ಪಿಎಂಎಲ್-ಎನ್ ಸರ್ಕಾರವನ್ನು ಪದಚ್ಯುತಗೊಳಿಸಿದ ಸಮಯದಲ್ಲಿದ್ದ ಸಂವಿಧಾನವನ್ನು ಮರುಸ್ಥಾಪನೆ ಮಾಡಬೇಕೆಂದೂ ಅವರು ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ತಮ್ಮನ್ನು ಮತ್ತು ಸೋದರನನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಿದ ಕ್ರಮವನ್ನು ಇಡೀ ರಾಷ್ಟ್ರ ತಿರಸ್ಕರಿಸಿದ್ದು, ಫೆಡರಲ್ ಸರ್ಕಾರವು ಈ ತೀರ್ಪಿನ ಬಗ್ಗೆ ಪರಿಶೀಲಿಸಬೇಕು ಎಂದು ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಫೆ.25ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಅಧ್ಯಕ್ಷ ಜರ್ದಾರಿ ಅವರು ಪಿಎಂಎಲ್-ಎನ್ ಆಡಳಿತವಿದ್ದ ಪಂಜಾಬ್ ಪ್ರಾಂತ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಿದರು. ರಾಜ್ಯಪಾಲರ ಆಡಳಿತ ಹೇರಿದ ಕ್ರಮ ಅಸಮರ್ಥನೀಯ ಎಂದು ಹೇಳಿದ ಷರೀಫ್ ಅಲ್ಲಿ ಪಿಎಂಎಲ್-ಎನ್ ಸರ್ಕಾರ ಮರುಸ್ಥಾಪನೆಗೆ ಆಗ್ರಹಿಸಿದರು. |