ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಅವರು ಅಧ್ಯಕ್ಷ ಜರ್ದಾರಿ ಅವರ ಕೋಪ ಮತ್ತು ಸೇಡಿಗೆ ಮೊದಲ ಬಲಿಪಶುವಾಗುವ ಸಾಧ್ಯತೆಯಿದೆಯೆಂದು ಸುಳಿವು ಸಿಕ್ಕಿದೆ. ಜರ್ದಾರಿ ಮತ್ತು ಪ್ರತಿಪಕ್ಷ ಪಿಎಂಎಲ್-ಕ್ಯೂ ಮೈತ್ರಿಕೂಟವೊಂದನ್ನು ರಚಿಸಿಕೊಂಡು ಪ್ರಧಾನಮಂತ್ರಿಯನ್ನು ಹುದ್ದೆಯಿಂದ ಪದಚ್ಯುತಗೊಳಿಸುವ ಹುನ್ನಾರ ನಡೆಸಿದ್ದಾರೆಂದು ಮಾಧ್ಯಮ ವರದಿ ತಿಳಿಸಿದೆ.
ಹೊಸ ಕಾರ್ಯತಂತ್ರದ ಪ್ರಕಾರ, ಪಿಎಂಎಲ್-ಎನ್ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ ರಚಿಸುವುದಕ್ಕೆ ಬೆಂಬಲ ನೀಡದಂತೆ ಪಿಎಂಎಲ್-ಕ್ಯೂ ಭಿನ್ನಮತೀಯರಿಗೆ ನಿಷೇಧ ವಿಧಿಸಿ ಅಧ್ಯಕ್ಷರು ಸುಗ್ರೀವಾಜ್ಞೆ ಹೊರಡಿಸುವುದು. ಪಂಜಾಬ್ ತನ್ನ ಅಧೀನದಲ್ಲಿ ಬಂದ ಬಳಿಕ ಆಡಳಿತರೂಢ ಪಿಪಿಪಿಯು ಪಿಎಂಎಲ್-ಕ್ಯೂ ಲೀಗ್ ಜತೆ ಸೇರಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದೆಂದು ನ್ಯೂಸ್ ಡೇಲಿ ವರದಿ ಮಾಡಿದೆ.
ಜರ್ದಾರಿ ಮತ್ತು ಪಿಎಂಎಲ್-ಕ್ಯೂ ನಾಯಕರಾದ ಚೌಧರಿ ಶುಜಾತ್ ಹುಸೇನ್, ಚೌಧರಿ ಪರ್ವೇಜ್ ಎಲಾಹಿ ಮತ್ತು ಮೂನಿಸ್ ಎಲಾಹಿ ಜತೆ ನಡೆದ ಗುಪ್ತಸಭೆಗಳಲ್ಲಿ ಈ ಕಾರ್ಯತಂತ್ರದ ರೂಪುರೇಷೆ ಅಂತಿಮಗೊಂಡಿತೆಂದು ತಿಳಿದುಬಂದಿದೆ.
ಆದಾಗ್ಯೂ, ಅಧ್ಯಕ್ಷೀಯ ವಕ್ತಾರ ಫರಾತುಲ್ಲಾ ಬಾಬರ್ ಇಂತಹ ಭೇಟಿಗಳು ನಡೆದಿದ್ದನ್ನು ಅಲ್ಲಗಳೆದಿದ್ದಾರೆ. ಪಂಜಾಬ್‌ನಲ್ಲಿ ಮತ್ತು ಕೇಂದ್ರದಲ್ಲಿ ಪಿಪಿಪಿಗೆ ಸಹಕಾರ ನೀಡುವುದಾಗಿ ಚೌಧರಿ ಸೋದರಸಂಬಂಧಿಗಳು ಜರ್ದಾರಿಗೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಪಂಜಾಬ್‌ನಲ್ಲಿ ಪಿಎಂಎಲ್-ಕ್ಯೂನ 34 ಸದಸ್ಯರನ್ನು ಹದ್ದುಬಸ್ತಿನಲ್ಲಿಡಲು ಒಂದು ರೀತಿಯ ಶಾಸನ ರೂಪಿಸುವ ಸಲುವಾಗಿ ಫೆಡರಲ್ ಸರ್ಕಾರ ಪರಿಶೀಲನೆ ನಡೆಸಿದೆ. ಗಿಲಾನಿ ಮತ್ತು ಪಿಎಂಎಲ್-ಎನ್ ನಾಯಕರಾದ ನವಾಜ್ ಹಾಗೂ ಶಾಬಾಜ್ ನಡುವೆ ನಿಕಟ ಸಂಬಂಧ ಕುರಿತು ಜರ್ದಾರಿ ಅತೃಪ್ತಗೊಂಡಿದ್ದಾರೆಂದು ತಿಳಿದುಬಂದಿದೆ.
ವಜಾಗೊಂಡ ನ್ಯಾಯಾಧೀಶರ ಬಿಕ್ಕಟ್ಟಿನಲ್ಲಿ ಗಿಲಾನಿ ಶಾಂತಿದೂತರಾಗಿ ಜರ್ದಾರಿಗೆ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ ಬಳಿಕ ಜರ್ದಾರಿ ಸಿಟ್ಟಾಗಿದ್ದಾರೆಂದು ಹೇಳಲಾಗಿದೆ. |