ಎಲ್‌ಟಿಟಿಇ ಹಿಡಿತದ ಪ್ರದೇಶದಿಂದ ಇದುವರೆಗೆ 45,519 ತಮಿಳರು ಸರ್ಕಾರಿ ನಿಯಂತ್ರಿತ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆಂದು ಶ್ರೀಲಂಕಾ ಸರ್ಕಾರ ಗುರುವಾರ ತಿಳಿಸಿದೆ.
ಸರ್ಕಾರ ಪ್ರಕಟಿಸಿರುವ ಅಂಕಿಅಂಶಗಳಿಂದ ಕ್ಷೀಣಿಸುತ್ತಿರುವ ಎಲ್‌ಟಿಟಿಇ ಅಧೀನ ಪ್ರದೇಶದಿಂದ ನಾಗರಿಕರ ವಲಸೆಯು ಕಳೆದ ಕೆಲವು ದಿನಗಳಿಂದ ತೀವ್ರಗತಿಯಲ್ಲಿರುವುದನ್ನು ತೋರಿಸಿದೆ.
ಮಿಲಿಟರಿ ಪ್ರಕಾರ ಎಲ್‌ಟಿಟಿಇ ನಿಯಂತ್ರಣದ ಪ್ರದೇಶವು 28 ಚದರ ಕಿಮೀ ಸುತ್ತಳತೆಗೆ ಕ್ಷೀಣಿಸಿದ್ದು, ಅವರ ಹಿಡಿತದ ಪ್ರದೇಶದಲ್ಲಿ ಇನ್ನೂ 70,000 ತಮಿಳು ನಾಗರಿಕರು ಸಿಕ್ಕಿಬಿದ್ದಿದ್ದಾರೆಂದು ಸರ್ಕಾರ ಅಂದಾಜು ಮಾಡಿದೆ.
ಎಲ್‌ಟಿಟಿಇ ಉಗ್ರರಿಗೆ ಶರಣಾಗಿ ಶಸ್ತ್ರಾಸ್ತ್ರ ಒಪ್ಪಿಸುವಂತೆ ಮೇಲಿಂದ ಮೇಲೆ ಸೂಚಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮೂಹ ಮಾಧ್ಯಮ ಸಚಿವ ಲಕ್ಷ್ಮಣ ಯಾಪ ಅಬೆಯವರ್ದನ ತಿಳಿಸಿದ್ದಾರೆ. ನಿಯೋಜಿತ ಸುರಕ್ಷಿತ ವಲಯದತ್ತ ಯಾವುದೇ ಸಂದರ್ಭದಲ್ಲಿಯೂ ಗುಂಡು ಹಾರಿಸದಂತೆ ಮಿಲಿಟರಿಗೆ ಸೂಚನೆ ನೀಡಲಾಗಿದೆ.
ಆದರೆ ಮಿಲಿಟರಿ ಮತ್ತು ಎಲ್‌ಟಿಟಿಇ ಸುರಕ್ಷಿತ ವಲಯದ ಮೇಲೆ ಗುಂಡು ಹಾರಿಸುತ್ತಿವೆಯೆಂದು ಪರಸ್ಪರ ದೋಷಾರೋಪಣೆ ಮಾಡಿವೆ.ಎಲ್‌ಟಟಿಇನ ಪುತ್ತುಕುಡಿಯರಿಪ್ಪು ನೆಲೆಗಳ ಮೇಲೆ ದಾಳಿ ಮಾಡಿದಾಗ 31 ತಮಿಳು ವ್ಯಾಘ್ರಗಳು ಸತ್ತಿರುವುದಾಗಿ ಮಿಲಿಟರಿ ತಿಳಿಸಿದೆ. ಸುಮಾರು 384 ನಾಗರಿಕರು ಪಡೆಗಳಿಂದ ರಕ್ಷಣೆ ಕೋರಿದ್ದಾರೆ.
ನಾಗರಿಕರು ಎಲ್‌ಟಿಟಿಇನಿಂದ ಅಭೂತಪೂರ್ವ ಸಂಕಷ್ಟಗಳಿಗೆ ಗುರಿಯಾಗಿದ್ದಾಗಿ ತಿಳಿದುಬಂದಿದೆ.ಎಲ್‌ಟಿಟಿಇ ಸಮರೋದ್ದೇಶಗಳಿಗಾಗಿ ಮಕ್ಕಳನ್ನು ಬಲಾತ್ಕಾರದಿಂದ ನೇಮಿಸಿಕೊಳ್ಳುತ್ತಿದ್ದು, ತಮ್ಮ ಆದೇಶ ಧಿಕ್ಕರಿಸಿದ ವ್ಯಕ್ತಿಗಳನ್ನು ಮತ್ತು ಕುಟುಂಬಗಳನ್ನು ಅಮಾನುಷವಾಗಿ ಕೊಂದಿದ್ದಾರೆಂದು ನಾಗರಿಕರು ಬಯಲುಮಾಡಿದ್ದಾರೆ. |