ತನ್ನ ಪುತ್ರಿಯನ್ನು ಕತ್ತಲ ಕೋಣೆಯಲ್ಲಿ ಕೂಡಿಹಾಕಿ ಸತತ ಅತ್ಯಾಚಾರ ಮಾಡಿ 7 ಮಕ್ಕಳಿಗೆ ತಂದೆಯಾದ ಆಸ್ಟ್ರಿಯದ ಪ್ರಜೆ ಜೋಸೆಫ್ ಫ್ರಿಟ್ಜಲ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
73 ವರ್ಷ ವಯಸ್ಸಿನ ಫ್ರಿಟ್ಜಲ್ ಅತ್ಯಾಚಾರ, ಹತ್ಯೆ, ಗುಲಾಮಗಿರಿ, ನಿಷಿದ್ಧ ಲೈಂಗಿಕತೆ ಸೇರಿದಂತೆ ಎಲ್ಲ ಆರೋಪಗಳಲ್ಲಿ ತಪ್ಪಿತಸ್ಥನಾಗಿದ್ದಾನೆ. ತೀರ್ಪಿನಿಂದ ಭಾವತಿರೇಕಕ್ಕೆ ಒಳಗಾಗದ ಫ್ರಿಟ್ಜೆಲ್, ತೀರ್ಪನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು, ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾನೆ.
ಪುತ್ರಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ರಾಷ್ಟ್ರದ್ಯಾಂತ ಮಾಧ್ಯಮದ ಆಸಕ್ತಿಯ ಕೇಂದ್ರಬಿಂದುವಾಗಿ, ಅನೇಕ ತಿರುವುಗಳನ್ನು ಪಡೆದುಕೊಂಡಿತು. ಈ ಪ್ರಕರಣ ಮೊದಲಿಗೆ ಬೆಳಕಿಗೆ ಬಂದಾಗ ಫ್ರಿಟ್ಜೆಲ್ ವಿಕೃತ ಅಪರಾಧಗಳು ಬಿಚ್ಚಿಕೊಳ್ಳುತ್ತಿದ್ದಂತೆ ಇಡೀ ಆಸ್ಟ್ರಿಯ ಜನತೆ ಆಘಾತಕ್ಕೀಡಾಗಿದ್ದರು.
ಈ ಪ್ರಕರಣದ ಬಗ್ಗೆ ತೀರ್ಪು ನೀಡಿದ ಕೋರ್ಟ್ ಫ್ರಿಟ್ಜಲ್ ಮಾನಸಿಕ ಚಿಕಿತ್ಸೆಯ ಸೌಲಭ್ಯದೊಂದಿಗೆ ಜೀವಾವಧಿ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ. ಪುತ್ರಿಯ ಮಗುವೊಂದಕ್ಕೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿದ್ದರೆ ಮಗು ಬದುಕುಳಿಯುತ್ತಿತ್ತೆಂಬ ಪ್ರಾಸಿಕ್ಯೂಟರ್ ವಾದವನ್ನು ತೀರ್ಪುಗಾರ ಸರ್ವಾನುಮತದಿಂದ ಒಪ್ಪಿಕೊಂಡು ಫ್ರಿಟ್ಜೆಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಮೊದಲಿಗೆ ಪ್ರತಿವಾದಿ ಹತ್ಯೆ ಮತ್ತು ಗುಲಾಮಗಿರಿ ಆರೋಪಗಳನ್ನು ಅಲ್ಲಗಳೆದರೂ ಬಳಿಕ ಅವನ ಪುತ್ರಿ ಸಾಕ್ಷ್ಯ ನುಡಿದ ಬಳಿಕ ಒಪ್ಪಿಕೊಂಡನೆಂದು ಹೇಳಲಾಗಿದೆ.
|