ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ದಾಳಿಯು ಸಂಪೂರ್ಣ ಭದ್ರತಾ ಲೋಪ ಎಂದು ಒಪ್ಪಿಕೊಂಡಿರುವ ಪಾಕಿಸ್ತಾನದ ವರದಿಯಲ್ಲಿ ಕೆಲವು ವಿದೇಶಿ ರಾಷ್ಟ್ರಗಳ ಕೈವಾಡವಿದೆಯೆಂದು ಆರೋಪಿಸಿದ್ದು, ಎಲ್‌ಇಟಿ ಮತ್ತು ಜೆಯುಡಿ ನಿಷೇಧಿತ ಭಯೋತ್ಪಾದಕ ಗುಂಪುಗಳಿಗೆ ಕ್ಲೀನ್ ಚಿಟ್ ನೀಡಿದೆ.
ಕೆಲವು ವಿದೇಶಿ ಶಕ್ತಿಗಳ ಯೋಜನೆ ಮತ್ತು ಆರ್ಥಿಕನೆರವಿನಿಂದ ದಾಳಿ ನಡೆಸಲಾಗಿದ್ದು, ದಕ್ಷಿಣ ವಜಿರಿಸ್ತಾನ ಪ್ರದೇಶದಲ್ಲಿ ನೆಲೆ ಹೊಂದಿರುವ ಉಗ್ರರನ್ನು ದುಷ್ಕೃತ್ಯಕ್ಕೆ ಬಳಸಿರಬಹುದು ಎಂದು ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.
40 ಅಂಶಗಳ ವರದಿಯನ್ನು ಒಳಾಡಳಿತ ಸಚಿವಾಲಯ ಮುಖ್ಯಸ್ಥ ರೆಹ್ಮಾನ್ ಮಲ್ಲಿಕ್ ಪ್ರಧಾನಿ ಗಿಲಾನಿ ಅವರಿಗೆ ಮಂಡಿಸಿದ್ದು, ದಾಳಿಯಲ್ಲಿ ಭಾಗಿಯಾದ 12 ಭಯೋತ್ಪಾದಕರನ್ನು ಬಂಧಿಸಲು ವಿಫಲವಾದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಸುಮಾರು ಅರ್ಧಗಂಟೆವರೆಗೆ ದಾಳಿಯ ಸ್ಥಳಕ್ಕೆ ತಲುಪಲು ಪೊಲೀಸ್ ಪಡೆ ವಿಫಲವಾಯಿತು. ಸಂಪೂರ್ಣ ಭದ್ರತಾ ಲೋಪವು ಭಯೋತ್ಪಾದಕರಿಗೆ ಮುಕ್ತಹಸ್ತ ನೀಡಿತೆಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಸರ್ಕಾರವಿನ್ನೂ ಬಹಿರಂಗಮಾಡಿಲ್ಲ ಮತ್ತು ಬೆಳವಣಿಗೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. |