ಸುಮಾರು 3 ದಶಕಗಳ ಕಾಲ ಇರಾನ್ ಜತೆ ಅಪನಂಬಿಕೆ ಮತ್ತು ಹದಗೆಟ್ಟ ಬಾಂಧವ್ಯಕ್ಕೆ ತೆರೆಎಳೆಯಲು ಆಶಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶುಕ್ರವಾರ, ಇಸ್ಲಾಮಿಕ್ ರಿಪಬ್ಲಿಕ್ ಜತೆ ಪ್ರಾಮಾಣಿಕ ಮಾತುಕತೆ ಬಯಸಿದ್ದು, ಬೆದರಿಕೆಗಳ ಮೂಲಕ ಈ ಪ್ರಕ್ರಿಯೆ ಮುನ್ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಇರಾನ್‌ನ ಹೊಸ ವರ್ಷದ ನೌರುಜ್ ಉತ್ಸವದ ಅಂಗವಾಗಿ ಚಕಿತಕಾರಿ ವಿಡಿಯೋ ಸಂದೇಶ ನೀಡಿದ ಒಬಾಮಾ, ಅಮೆರಿಕ, ಇರಾನ್ ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಡುವೆ ರಚನಾತ್ಮಕ ಬಾಂಧವ್ಯ ಹೊಂದಲು ಒಬಾಮಾ ಆಡಳಿತ ಬದ್ಧವಾಗಿದೆಯೆಂದು ಹೇಳಿದರು.
'ಈ ಪ್ರಕ್ರಿಯೆಯು ಬೆದರಿಕೆಗಳ ಮೂಲಕ ಮುಂದುವರಿಯುವುದಿಲ್ಲ. ಅದರ ಬದಲಿಗೆ ಪ್ರಾಮಾಣಿಕ ಮತ್ತು ಪರಸ್ಪರ ಗೌರವ ನೆಲೆಗೊಳಿಸಿದ ಸಂಬಂಧವನ್ನು ನಾವು ಬಯಸುತ್ತೇವೆ' ಎಂದು ಟೆಹ್ರಾನ್ ಕುರಿತು ತಮ್ಮ ನೂತನ ರೂಪುರೇಷೆಯನ್ನು ಬಿಚ್ಚಿಟ್ಟ ಒಬಾಮಾ ಹೇಳಿದ್ದು, ಹಿಂದಿನ ಆಡಳಿತಗಳ ಕಟು ಧೋರಣೆಗಳಿಂದ ಬದಲಾಗಿದ್ದರ ಸುಳಿವು ನೀಡಿದ್ದಾರೆ.
ಶಾಂತಿ ಮತ್ತು ಸಹಭಾಗಿತ್ವದ ಹೊಸ ಶಕೆಗೆ ಕರೆ ನೀಡಿದ ಒಬಾಮಾ, ರಾಷ್ಟ್ರಗಳ ಸಮುದಾಯದಲ್ಲಿ ಸೂಕ್ತ ಸ್ಥಾನವನ್ನು ಇರಾನ್ ಪಡೆಯಲು ಅಮೆರಿಕ ಬಯಸುತ್ತದೆಂದು ನುಡಿದರು. 'ನೀವು ಆ ಹಕ್ಕನ್ನು ಹೊಂದಿದ್ದೀರಿ,ಅದು ನಿಜವಾದ ಜವಾಬ್ದಾರಿಯೊಂದಿಗೆ ಬಂದಿದೆ. ಅದನ್ನು ಭಯೋತ್ಪಾದನೆ ಅಥವಾ ಶಸ್ತ್ರಗಳ ಮೂಲಕ ಮುಟ್ಟಲು ಸಾಧ್ಯವಿಲ್ಲ. ಇರಾನ್ ಜನತೆ ಮತ್ತು ನಾಗರಿಕತೆಯ ನೈಜ ಶ್ರೇಷ್ಠತೆಯನ್ನು ಪ್ರದರ್ಶಿಸುವ ಶಾಂತಿಯುತ ಕ್ರಮಗಳ ಮೂಲಕ ಆ ಸ್ಥಾನವನ್ನು ಮುಟ್ಟಬೇಕು' ಎಂದು ಒಬಾಮಾ ಹೇಳಿದ್ದಾರೆ. |