ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಕಾರಾತ್ಮಕ ಸ್ನೇಹಾಭಿಲಾಷೆಯ ಸೂಚನೆ ನೀಡಿದ್ದರೂ, ಟೆಹ್ರಾನ್ ಪರಮಾಣು ಕಾರ್ಯಕ್ರಮ ಹಳಿತಪ್ಪುವುದಿಲ್ಲ ಎಂದು ಇರಾನ್ ಇಂಧನ ಖಾತೆ ಸಚಿವ ಪರ್ವಿಜ್ ಫಟ್ಟಾ ಇಸ್ತಾನ್‌ಬುಲ್‌ನಲ್ಲಿ ತಿಳಿಸಿದರು.
ಇಸ್ತಾನ್‌ಬುಲ್‌ನಲ್ಲಿ ವಿಶ್ವ ಜಲವೇದಿಕೆಯಲ್ಲಿ ಮಾತನಾಡಿದ ಫಟ್ಟಾ, ಇರಾನ್ ಪರಮಾಣು ಕಾರ್ಯಕ್ರಮದ ಮೇಲೆ ಒಬಾಮಾ ಅವರ ಸದ್ಭಾವನೆಯ ಸಂದೇಶ ಪರಿಣಾಮ ಬೀರುವುದೇ ಎಂದು ಪ್ರಶ್ನಿಸಿದಾಗ ಇಲ್ಲವೆಂದು ಹೇಳಿದರು.ಶಾಂತಿಯುತ ಪರಮಾಣು ಇಂಧನ ಸಾಧನೆಗೆ ಇರಾನ್ ದಾರಿಯನ್ನು ಆಯ್ಕೆಮಾಡಿದ್ದು, ನಾವು ಮುಖ್ಯವಾಗಿ ಈ ಗುರಿಯನ್ನು ಮುಟ್ಟಿದ್ದೇವೆ ಎಂದು ಫಟ್ಟಾ ಹೇಳಿದರು.
ಇಂದಿನಿಂದ 20 ದಿನಗಳೊಳಗಾಗಿ ಶಾಂತಿಯುತ ಪರಮಾಣು ಇಂಧನದ ನಮ್ಮ ಸಾಧನೆಗಳನ್ನು ಬಿಂಬಿಸುವ ಆಚರಣೆ ನಡೆಯಲಿದ್ದು ಅದರ ಬಗ್ಗೆ ನೀವು ಸುದ್ದಿ ಕೇಳುತ್ತೀರೆಂದು ಅವರು ಹೇಳಿದರು.ಒಬಾಮಾ ಸಂದೇಶ ಕುರಿತು ಕೇಳಿದಾಗ, 'ಈ ಸಂದೇಶದಲ್ಲಿ ಕೆಲವು ನಕಾರಾತ್ಮಕ ಅಂಶಗಳು ಅಡಗಿದ್ದರೂ ಖಂಡಿತವಾಗಿ ಸಕಾರಾತ್ಮಕವಾಗಿದೆ.
ಒಬಾಮಾ ಸಂದೇಶವನ್ನು ಇರಾನ್ ನಾಯಕರು ನಿಖರವಾಗಿ ಪರಿಶೀಲಿಸಿ, ಆ ಸಂದೇಶದ ಜತೆ ಒಬಾಮಾ ಮತ್ತು ಅವರ ಸರ್ಕಾರದಿಂದ ಧನಾತ್ಮಕ ಕ್ರಮವನ್ನು ನಾವು ನಿರೀಕ್ಷಿಸುತ್ತೇವೆ' ಎಂದು ಅವರು ನುಡಿದರು. |