ಉತ್ತರಕೊರಿಯವು ದಕ್ಷಿಣ ಕೊರಿಯ ಜತೆ ಗಡಿಯಾಚೆ ಮಿಲಿಟರಿ ನೇರ ದೂರವಾಣಿ ಸಂಪರ್ಕವನ್ನು ಮರುಸ್ಥಾಪಿಸಿದೆ.
ಗಡಿಯಾಚೆ ಸರಕುಗಳು ಮತ್ತು ಜನರ ಚಲನವಲನಗಳ ಬಗ್ಗೆ ನಿಗಾವಹಿಸಲು ಈ ಹಾಟ್‌ಲೈನ್ ಬಳಸಲಾಗುತ್ತದೆ. ಅಮೆರಿಕ-ದಕ್ಷಿಣ ಕೊರಿಯ ಮಿಲಿಟರಿ ಕವಾಯಿತಿನ ಹಿನ್ನೆಲೆಯಲ್ಲಿ ವ್ಯೋಂಗ್‌ಯಾಂಗ್ ಹಾಟ್‌ಲೈನ್ ಸಂಪರ್ಕವನ್ನು ಕಡಿದುಹಾಕಿತ್ತು. ಏತನ್ಮಧ್ಯೆ, ಚೀನಾ-ಉತ್ತರಕೊರಿಯ ಗಡಿಯಲ್ಲಿ ಇಬ್ಬರು ಅಮೆರಿಕದ ಪತ್ರಕರ್ತೆಯರನ್ನು ಬಂಧಿಸಿರುವುನ್ನು ಉತ್ತರ ಕೊರಿಯ ಖಚಿತಪಡಿಸಿದೆ.
ಉತ್ತರಕೊರಿಯ ಗಡಿಯೊಳಕ್ಕೆ ಪತ್ರಕರ್ತೆಯರು ಅಕ್ರಮವಾಗಿ ನುಸುಳಲು ಯತ್ನಿಸಿದ್ದರಿಂದ ಮಂಗಳವಾರ ಅವರನ್ನು ಬಂಧಿಸಿದ್ದಾಗಿ ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ. ಪತ್ರಕರ್ತೆಯರ ಬಂಧನದ ಬಗ್ಗೆ ಅಮೆರಿಕ ಇದಕ್ಕೆ ಮುಂಚೆ ಕಳವಳ ವ್ಯಕ್ತಪಡಿಸಿದೆ. ದಕ್ಷಿಣ ಕೊರಿಯ ಜತೆ ಉತ್ತರ ಕೊರಿಯದಲ್ಲಿರುವ ಜಂಟಿ ಕೊರಿಯ ಕೈಗಾರಿಕೆ ವಲಯಕ್ಕೆ ಸಂಪರ್ಕ ಕಲ್ಪಿಸುವ ಗಡಿ ಕ್ರಾಸಿಂಗ್ ಪುನಾರಂಭಿಸುವುದಾಗಿ ಉತ್ತರಕೊರಿಯ ತಿಳಿಸಿದೆ. ಏತನ್ಮಧ್ಯೆ, ಉತ್ತರ ಕೊರಿಯ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ಮೇಜಿಗೆ ಹಿಂದಿರುಗುವಂತೆ ಚೀನಾದ ಅಧ್ಯಕ್ಷರು ಉತ್ತರಕೊರಿಯಕ್ಕೆ ಆಗ್ರಹಿಸಿದ್ದಾರೆ.
ಉತ್ತರ ಕೊರಿಯ ವಿವಾದಾತ್ಮಕ ಪರಮಾಣು ಚಟುವಟಿಕೆಗಳನ್ನು ಸ್ಥಗಿತಗೊಳಿಸಿದರೆ ಅದಕ್ಕೆ ಪ್ರತಿಯಾಗಿ ನೆರವು ನೀಡುವ ಗುರಿಯನ್ನು 6 ರಾಷ್ಟ್ರಗಳ ಮಾತುಕತೆ ಹೊಂದಿದೆ. |