ಮದೀನಾದಲ್ಲಿ ಪ್ರವಾದಿ ಮೊಹಮ್ಮದ್ ಅವರ ಸಮಾಧಿಗೆ ಅಲಂಕರಿಸಲು ತಯಾರಿಸಲಾದ ಮುತ್ತಿನ ರತ್ನಗಂಬಳಿಯೊಂದು ದೋಹಾದಲ್ಲಿ ನಡೆದ ಹರಾಜಿನಲ್ಲಿ 5.5 ಮಿಲಿಯ ಡಾಲರ್‌ಗೆ ಮಾರಾಟವಾಗಿದೆ.
5 ಮಿಲಿಯ ಡಾಲರ್‌ಗೆ ಹರಾಜು ಆರಂಭವಾಗುವುದೆಂದು ನಿರೀಕ್ಷಿಸಲಾಗಿದ್ದು, ಕೆಲವೇ ಖರೀದಿದಾರರು ಇದ್ದಿದ್ದರಿಂದ 4.5 ಮಿಲಿಯ ಡಾಲರ್‌ಗೆ ಬಿಡ್ಡಿಂಗ್ ಆರಂಭಿಸಲಾಯಿತು. ಬರೋಡಾದ ಮುತ್ತಿನ ಜಮಖಾನ ಎಂದು ಹೆಸರಾದ ಕಾರ್ಪೆಟ್ ನೈಸರ್ಗಿಕ 2 ದಶಲಕ್ಷ ಮುತ್ತುಗಳಿಂದ ತಯಾರಿಸಲಾಗಿದೆ. ನೂರಾರು ಅಮೂಲ್ಯ ಕಲ್ಲುಗಳು ಮತ್ತು ರತ್ನಗಳು, ರೂಬಿ ಮತ್ತು ಪಚ್ಚೆಗಳಿಂದ ಅಲಂಕೃತವಾಗಿದೆ.
ನಾವು ಆರಂಭದ ಬಿಡ್ಡನ್ನು ತಗ್ಗಿಸಿದ್ದು, ದಳ್ಳಾಳಿ ಶುಲ್ಕ ಸೇರಿದಂತೆ 5.48 ದಶಲಕ್ಷ ಡಾಲರ್‌ಗೆ ಮಾರಾಟವಾಗಿದೆ ಎಂದು ಸೋತೆಬೈ ವಕ್ತಾರ ಹಬೀಬ್ ಭಾಷಾ ಹೇಳಿಕೆ ಉಲ್ಲೇಖಿಸಿ ಸುದ್ದಿಸಂಸ್ಥೆ ತಿಳಿಸಿದೆ. ಖರೀದಿದಾರನು ಅಜ್ಞಾತನಾಗಿ ಉಳಿಯಲು ಬಯಸಿದ್ದರಿಂದ ಅವರ ಗುರುತು ಬಹಿರಂಗ ಮಾಡಿಲ್ಲ ಎಂದು ವಕ್ತಾರ ಹಬೀಬ್ ಭಾಷಾ ತಿಳಿಸಿದರು.
ಮುತ್ತಿನ ಜಮಖಾನವನ್ನು ಬರೋಡದ ಶ್ರೀಮಂತ ಮಹಾರಾಜ ಗಾಯಕವಾರ್ ಖಂಡೆರಾವ್ ಪ್ರವಾದಿ ಮಹ್ಮದ್ ಸಮಾಧಿಗೆ ಉಡುಗೊರೆಯಾಗಿ ನೀಡಲು ತಯಾರಿಸಿದ್ದರು. ಮಹಾರಾಜ ಅಸುನೀಗಿದ ಬಳಿಕ ಅದು ರವಾನೆಯಾಗದೇ ಭಾರತದಲ್ಲಿಯೇ ಉಳಿದು ದೆಹಲಿ ವಸ್ತುಪ್ರದರ್ಶನದ ಗಮನಸೆಳೆಯುವ ವಸ್ತುವಾಗಿತ್ತು. ಬಳಿಕ ಕುಟುಂಬದವರೊಬ್ಬರು ಅದನ್ನು ಮೊನ್ಯಾಕೊಗೆ ಒಯ್ದರು. ಜಮಖಾನಕ್ಕೆ ಹೆಣೆಯಲಾಗಿರುವ ಸಣ್ಣ ನೈಸರ್ಗಿಕ ಮುತ್ತುಗಳನ್ನು ಕೊಲ್ಲಿಯ ಜಲಪ್ರದೇಶದಿಂದ ತರಲಾಗಿತ್ತು. |