ಭಾರತ ಮತ್ತು ಚೀನಾದ ವಿದ್ಯಾರ್ಥಿಗಳ ಜತೆ ಸ್ಪರ್ಧಿಸುವಂತಾಗಲು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕನ್ನರಿಗೆ ಒತ್ತಾಯಿಸಿದ್ದಾರೆ.
ಕ್ಯಾಲಿಫೋರ್ನಿಯದ ಕೋಸ್ಟಾ ಮೆಸಾದ ಪುರಭವನದ ಸಭೆಯಲ್ಲಿ ಮಾತನಾಡುತ್ತಿದ್ದ ಒಬಾಮಾ, ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಅದಕ್ಕೆ ಹೆಚ್ಚು ಒತ್ತುನೀಡುವಂತೆ ತಾವು ಚುನಾವಣೆ ಪ್ರಚಾರದ ದಿನದಿಂದಲೂ ಹೇಳುತ್ತಿರುವುದಾಗಿ ನುಡಿದರು. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನಾವು ಅನೇಕ ಸುಧಾರಣೆಗಳನ್ನು ಮಾಡಬೇಕಾಗಿದೆ ಎಂದರು.
ಇದು ಬೋಧಕರ ಕೆಲಸ ಮಾತ್ರವಲ್ಲ. ತಂದೆತಾಯಿಗಳು ಕೂಡ ಇದಕ್ಕೆ ಸಂಬಂಧಿಸಿದಂತೆ ಮುಖ್ಯಪಾತ್ರ ವಹಿಸಬೇಕು ಎಂದು ನುಡಿದರು.
ನೀವು ಎಲ್ಲ ಹೊರೆಯನ್ನು ಶಿಕ್ಷಕರ ಮೇಲೆ ಹೊರಿಸುವುದು ಸಾಧ್ಯವಿಲ್ಲ. ಅವರು ಮನೆಪಾಠ ಮಾಡುವುದನ್ನು ಖಾತ್ರಿಮಾಡದಿದ್ದರೆ, ಪರಿಣತಿ ಮತ್ತು ಜ್ಞಾನದ ಹಸಿವನ್ನು ಮಕ್ಕಳಲ್ಲಿ ನೀವು ತುಂಬದಿದ್ದರೆ ಅವರ ಶಿಕ್ಷಕರು ಎಷ್ಟೇ ದಕ್ಷರಾಗಿದ್ದರೂ ಮಕ್ಕಳು ಉತ್ತಮವಾಗಿ ಓದುವುದಿಲ್ಲ ಎಂದು ಒಬಾಮಾ ನುಡಿದರು. |