ಲಂಡನ್: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಯಾಲಿಟಿ ಟಿವಿ ತಾರೆ ಜೇಡ್ ಗೂಡಿ ತನ್ನ ನಿವಾಸದಲ್ಲಿ ಶನಿವಾರ ರಾತ್ರಿ(ಲಂಡನ್ ಸಮಯ) ಸಾವನ್ನಪ್ಪಿದ್ದಾರೆ ಎಂದು ಅವರ ವಕ್ತಾರ ಮ್ಯಾಕ್ಸ್ ಕ್ಲಿಫರ್ಡ್ ಹೇಳಿದ್ದಾರೆ. ರಿಯಾಲ್ಟಿ ಕಾರ್ಯಕ್ರಮ ಖ್ಯಾತಿಯ ಗೂಡಿ ಮರಣಕಾಲಕ್ಕೆ 27ರ ವಯಸ್ಸಿನವರಾಗಿದ್ದರು.
ಅವರು ಭಾರತದಲ್ಲಿ ಕಲರ್ಸ್ ಟಿವಿಯ ಬಿಗ್ ಬಾಸ್ ರಿಯಾಲಿಟಿ ಟಿವಿ ಶೋದ ಚಿತ್ರೀಕಣದಲ್ಲಿ ತೊಡಗಿದ್ದಾಗ ಸರ್ವಿಕಲ್ ಕ್ಯಾನ್ಸರ್ ಗೆ ತುತ್ತಾಗಿರುವ ವಿಚಾರ ಪತ್ತೆಯಾಗಿತ್ತು. ಇದರಿಂದಾಗಿ ಅವರು ಕಾರ್ಯಕ್ರಮವನ್ನು ಅರ್ಧದಲ್ಲೇ ತೊರೆದು ಚಿಕಿತ್ಸೆಗಾಗಿ ತನ್ನೂರಿಗೆ ಮರಳಿದ್ದರು. ಶಿಲ್ಪಾಶೆಟ್ಟಿ ಬಿಗ್ ಕಾರ್ಯಕ್ರಮ ನಡೆಸಿದ್ದರು.
ಇವರಿಗೆ ರಾಯಲ್ ಮರ್ಸೆಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಾರಣಾಂತಿಕ ಖಾಯಿಲೆಯು ದೇಹಾದ್ಯಂತ ವ್ಯಾಪಿಸಿದ್ದು ಅವರ ಸಾವು ಖಚಿತವೆಂದು ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದರು. ಗೂಡಿ ಅವರು ಇತ್ತೀಚೆಗೆ ತನ್ನ ಕಣ್ಣಿನ ದೃಷ್ಟಿಯನ್ನೂ ಕಳೆದು ಕೊಂಡಿದ್ದರು. ಮರಣ ಕಾಲಕ್ಕೆ ತನ್ನ ಮನೆಯಲ್ಲಿ ಸಾವನ್ನಪ್ಪಲು ಇಚ್ಛಿಸಿದ್ದ ಅವರು ತನ್ನ ಕೊನೆಯ ಕಾಲವನ್ನು ಕುಟುಂಬದೊಂದಿಗೆ ಕಳೆಯಲು ಬಯಸಿದ್ದರು. ಅವರ ಇಚ್ಛೆಯಂತೆ ಅವರನ್ನು ಅಪ್‌ಶೈರ್ ಎಸ್ಸೆಕ್ಸ್ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು.
ಅವರ ಪತಿ ಜಾಕ್ ಟ್ವಿಡ್ ಹಾಗೂ ಅವರ ತಾಯಿ ಅವರ ಬಳಿ ಇಪ್ಪತ್ತನಾಲ್ಕು ಗಂಟೆಯೂ ಇದ್ದು ಅವರ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಕಳೆದ ಸೋಮವಾರ ಗೂಡಿ ತನ್ನ ಮಕ್ಕಳಾದ ಬಾಬ್ಬಿ(5) ಮತ್ತು ಫ್ರೆಡ್ಡಿ(4)ಗೆ ಅಂತಿಮ ವಿದಾಯ ಹೇಳಿದ್ದರು. ಮಕ್ಕಳು ತನ್ನ ಸಾವಿಗೆ ಸಾಕ್ಷಿಯಾಗುವುದು ಬೇಡ ಎಂಬುದು ಅವರ ಮನೋಇಚ್ಛೆಯಾಗಿತ್ತು.
ಡೆಂಟಲ್ ನರ್ಸ್ ಆಗಿದ್ದ ಗೂಡಿ, 2002ರಲ್ಲಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತೆ ಹಿಂತಿರುಗಿ ನೋಡಿರಲಿಲ್ಲ. ಬಳಿಕ ಜನಾಂಗೀಯ ನಿಂದನೆ ಪ್ರಕರಣದಿಂದಾಗಿ ವಿಶ್ವಾದ್ಯಂತ ಸುದ್ದಿಯಾಗಿದ್ದರು.
ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಸಹ ಸ್ಫರ್ಧಿಯಾಗಿದ್ದ ಭಾರತೀಯ ನಟಿ ಶಿಲ್ಪಾಶೆಟ್ಟಿಯನ್ನು ಜನಾಂಗೀಯವಾಗಿ ನಿಂದಿಸಿ ವಿವಾದಕ್ಕೆ ಸಿಲುಕಿದ್ದರು. ಈ ಪ್ರಕರಣ ವಿಶ್ವಾದ್ಯಂತ ಬಹುದೊಡ್ಡ ಸುದ್ದಿಯಾಗಿತ್ತು. ಬಳಿಕ ಅವರು ಶಿಲ್ಪಾರಿಂದ ಕ್ಷಮೆ ಯಾಚಿಸಿದ್ದು, ಇಬ್ಬರೊಳಗಿನ ಸಂಬಂಧ ಸುಗಮವಾಗಿತ್ತು.
ಗೂಡಿಯನ್ನು ನೋಡಲು ಶಿಲ್ಪಾ ಶೆಟ್ಟಿ ಲಂಡನ್‌ಗೆ ಧಾವಿಸಿದ್ದರಾದರೂ, ಅವರಿಗೆ ಗೂಡಿಯವರನ್ನು ನೋಡಲು ಅವಕಾಶ ಕಲ್ಪಿಸಿರಲಿಲ್ಲ. |