ಇದು ವೈದ್ಯ ಲೋಕದಲ್ಲೇ ದಾಖಲೆಯ ವಿಸ್ಮಯ. ಸರ್ಜರಿ ಮೂಲಕ ಲಿಂಗ ಬದಲಾಯಿಸಿಕೊಂಡು ಪುರುಷನಾಗುವ ಹಂತದಲ್ಲಿದ್ದ ಮಹಿಳೆ ಈಗ ಅವಳಿಗಳಿಗೆ ಜನ್ಮ ನೀಡಲಿದ್ದಾಳೆ(ನೆ)! ವಿಚಿತ್ರವೆಂದರೆ, ಮಗು ಹೆತ್ತ ನಂತರ ಈಕೆ ತಾಯಿಯಲ್ಲ, ತಂದೆ.
ಸ್ಪೈನ್‌ನ 25 ವರ್ಷದ ರುಬೆನ್ ಕೊರೋನಡೋ ಎಂಬಾಕೆ ಈಗ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಕೆಲವು ಸಮಯಗಳ ಹಿಂದಿನಿಂದಲೇ ಪ್ರಜನನ ಚಿಕಿತ್ಸೆ ತೆಗೆದುಕೊಂಡು ಈಕೆ ಬಸುರಿಯಾಗಿ ಈಗ ಎರಡು ಅವಳಿ ಮಕ್ಕಳಿಗೂ ತಾಯಿಯಾಗಲಿದ್ದಾಳೆ. ಆದರೆ ಹೆತ್ತ ಮೇಲೆ ಈಕೆಯ ಗೆಳತಿ ತಾಯಿಯಾದರೆ, ಈಕೆ ತಂದೆಯಾಗುತ್ತಾನೆ!
ರುಬೆನ್‌ನನ್ನು ಅವಳಿ ಮಕ್ಕಳನ್ನು ಹೆರುವ ಮೊದಲೇ ತನ್ನ ಗೆಳತಿಯನ್ನು ಮದುವೆಯಾಗಲಿದ್ದಾಳೆ. ಮಗು ಹೆತ್ತ ನಂತರ ಲಿಂಗ ಬದಲಾವಣೆ ಚಿಕಿತ್ಸೆಗೆ ಪೂರ್ಣಗೊಳಿಸಿ ತನ್ನ ಗೆಳತಿಯ ಸಂಪೂರ್ಣ ಗಂಡನಾಗಲಿದ್ದಾಳೆ. ರುಬೆನ್‌ನ ನಿಜ ನಾಮಧೇಯ ಎಸ್ಟೇಫೇನಿಯಾ ಯಾನೆ ಸ್ಟೆಫೆನಿ. ಆದರೆ ಆ ಮಕ್ಕಳು ರುಬೆನ್‌ನವಲ್ಲ. ಆಕೆಯ ಗೆಳತಿಯ ಹಳೆಯ ಸಂಬಂಧದಿಂದಾಗಿ ಆಕೆ ಎರಡು ಮಕ್ಕಳನ್ನು ಹೆತ್ತಿದ್ದಳು. ಆದರೆ ಇನ್ನು ಆಕೆಗೆ ಮಕ್ಕಳಾಗುವುದಿಲ್ಲ ಎಂದು ವೈದ್ಯರು ದೃಢಪಡಿಸಿದ್ದರಿಂದ ಆಕೆಗೆ ತಾಯಿಯಾಗುವ ಅವಕಾಶ ಇರಲಿಲ್ಲ. ಆದರೆ ರುಬೆನ್ ತನ್ನ ಗೆಳತಿಯಿಂದ ತನಗೆ ಮಗು ಬಯಸಿದ್ದರಿಂದ ತಾನೇ ಮಕ್ಕಳನ್ನು ಹೆತ್ತು ನಂತರ ಸಂಪೂರ್ಣ ಗಂಡಾಗುವ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನಲಾಗಿದೆ.
ರುಬೆನ್ ಹುಟ್ಟಿದಾಗಿನಿಂದ ಸ್ತ್ರೀಯಾಗಿದ್ದರೂ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪುರುಷನಾಗುವ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಳು. ಆದರೆ, ಸ್ಪಾನಿಷ್ ಕಾನೂನಿನ ಪ್ರಕಾರ ಆತ ಈಗಲೂ ಸ್ತ್ರೀಯೇ. ಆದರೆ, ಲಿಂಗ ಬದಲಾವಣೆ ಹಂತ ನಡೆಯುತ್ತಿದ್ದರೂ, ಸ್ತ್ರೀಜನನಾಂಗವನ್ನು ಹಾಗೆಯೇ ಉಳಿಸಿಕೊಂಡಿದ್ದರಿಂದ ಗರ್ಭಿಣಿಯಾಗಲು ಅವಕಾಶವಿತ್ತು. ಹಾಗಾಗಿ ಕೆಲವು ಚಿಕಿತ್ಸೆಗೆ ಒಳಗಾಗಿ ಈಗ ಮಗು ಪಡೆದಿದ್ದಾಳೆ. ನಂತರ ಮತ್ತೆ ಚಿಕಿತ್ಸೆಗೆ ಒಳಗಾಗಿ ಸ್ತ್ರೀಜನನಾಂಗವನ್ನೂ ತೆಗೆದು ಸಂಪೂರ್ಣ ಪುರುಷನಾಗುತ್ತಾನಂತೆ. ರುಬೆನ್‌ಗೆ ತಾಯಿಯಾಗುವುದಕ್ಕಿಂತಲೂ ತಂದೆಯಾಗುವುದೆಂದರೆ ಹೆಚ್ಚು ಇಷ್ಟವಂತೆ.
ಕಳೆದ ವರ್ಷ ಇಂಥದ್ದೇ ಒಂದು ಪ್ರಕರಣ ನಡೆದರೂ, ಲಿಂಗ ಬದಲಾವಣೆ ಮಾಡಿದಾತ ಪಡೆದುದು ಒಂದೇ ಮಗುವಾಗಿತ್ತು. ಈಗ ಈತ ಅವಳಿ ಮಕ್ಕಳನ್ನು ಪಡೆಯುವುದು ವೈದ್ಯ ವಲಯಕ್ಕೇ ಅಚ್ಚರಿ ಮೂಡಿಸಿದೆ. |