ಶ್ರೀಲಂಕಾ ಸೇನೆಯ ವಿರುದ್ಧ ಕದನದಲ್ಲಿ ಎಲ್‌ಟಿಟಿಇ ಸಣ್ಣ ಸುತ್ತಳತೆಯ ಪ್ರದೇಶಕ್ಕೆ ತಳ್ಳಲ್ಪಟ್ಟಿದ್ದು, ಯಾವುದೇ ಪೂರ್ವಷರತ್ತಿಲ್ಲದೇ ಮಾತುಕತೆಯನ್ನು ನಡೆಸುವ ಪ್ರಸ್ತಾಪವನ್ನು ಮಂಡಿಸಿದೆ. ಆದರೆ ಶ್ರೀಲಂಕಾ ಸರ್ಕಾರ ಈ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದು, ತಮಿಳು ವ್ಯಾಘ್ರಗಳಿಗೆ ಮೊದಲು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಬಳಿಕ ಮಾತುಕತೆಗೆ ಬರುವಂತೆ ಆದೇಶಿಸಿದೆ.
ಬಂಡುಕೋರರ ರಾಜಕೀಯ ಮುಖಂಡ ಬಾಲಸಿಂಗಂ ನಾದೇಸನ್ ತುರ್ತು ಕದನವಿರಾಮಕ್ಕೆ ಕರೆ ನೀಡಿದ್ದು, ತಮಿಳು ವ್ಯಾಘ್ರಗಳು ಬೇಷರತ್ತಾಗಿ ಮಾತುಕತೆಗೆ ಇಳಿಯುವ ಪ್ರಸ್ತಾಪವನ್ನು ಮಂಡಿಸಿದ್ದಾನೆ. ನಾಗರಿಕರಿಗೆ ಮುಂದುವರಿದ ಮಾನವೀಯ ಸೌಲಭ್ಯಗಳ ನಿರಾಕರಣೆ, ಸತತ ಮದ್ದುಗುಂಡು ಮತ್ತು ವೈಮಾನಿಕ ದಾಳಿಗಳು ಅಸಹನೀಯ ಸ್ಥಿತಿಯನ್ನು ಸೃಷ್ಟಿಸಿರುವುದಾಗಿ ನಾದೇಶನ್ ಹೇಳಿದ್ದಾನೆ.
ದಿನನಿತ್ಯದ ಬಾಂಬ್ ದಾಳಿ ಮತ್ತು ಶೆಲ್ ದಾಳಿಯನ್ನು ನಾದೇಸನ್ ನರಹತ್ಯೆಯ ಯುದ್ಧವೆಂದು ಬಣ್ಣಿಸಿದ್ದಾನೆ. ಏತನ್ಮಧ್ಯೆ, ಸರ್ಕಾರ ತಾವು ಇದುವರೆಗೂ ಅಂತಹ ಪ್ರಸ್ತಾಪ ಸ್ವೀಕರಿಸಿಲ್ಲವೆಂದು ಹೇಳಿದ್ದು, ರಾಷ್ಟ್ರದಿಂದಲೇ ಭಯೋತ್ಪಾದನೆ ಮೂಲೋತ್ಪಾಟನೆಗೆ ತಾವು ಬದ್ಧವಿರುವುದಾಗಿ ಹೇಳಿದೆ.
ನಾದೇಶನ್ ಸಂದರ್ಶನದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳು ಲಭ್ಯವಾಗಿಲ್ಲ. ನಮ್ಮ ನೀತಿಯೇನೆಂದರೆ ಮಾತುಕತೆಗೆ ಇಳಿಯುವ ಮುನ್ನ, ಎಲ್‌ಟಿಟಿಇ ಶಸ್ತ್ರ ತ್ಯಜಿಸಬೇಕು ಎಂದು ಹಿರಿಯ ಶ್ರೀಲಂಕಾ ಅಧಿಕಾರಿ ತಿಳಿಸಿದರು. ತೀವ್ರ ಸೋಲು ಮತ್ತು ಸಾವುನೋವು ಅನುಭವಿಸಿದ ಎಲ್‌ಟಿಟಿಇ ಅನೇಕ ಸಂದರ್ಭಗಳಲ್ಲಿ ಕದನವಿರಾಮಕ್ಕೆ ಕರೆ ನೀಡಿದ್ದರೂ ಸರ್ಕಾರ ಪ್ರತಿಭಾರಿ ನಿರಾಕರಿಸಿದೆ. |