ಇರಾಕಿನ ಪ್ರಕ್ಷುಬ್ಧ, ಜನಾಂಗೀಯ ಮಿಶ್ರಣದ ಉತ್ತರ ದಿಯಾಲ ಪ್ರಾಂತ್ಯದಲ್ಲಿ ಕುರ್ದಿಯ ಅಂತ್ಯಕ್ರಿಯೆಯೊಂದರಲ್ಲಿ ಸೋಮವಾರ ಆತ್ಮಾಹುತಿ ಬಾಂಬರ್ ಸ್ವತಃ ಸ್ಫೋಟಿಸಿಕೊಂಡಿದ್ದರಿಂದ 25 ಜನರು ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕಿಕ್ಕಿರಿದು ನೆರೆದಿದ್ದ ಗುಂಪಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಉಂಟಾದ ಸಾವುನೋವಿನ ಸುದ್ದಿ ಇನ್ನೂ ಬರುತ್ತಲೇ ಇದ್ದು, ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ. ಇದಕ್ಕೆ ಮುಂಚೆ, ಪಶ್ಚಿಮ ಬಾಗ್ದಾದ್ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 9 ಜನರು ಸತ್ತಿದ್ದು, 23 ಮಂದಿ ಗಾಯಗೊಂಡಿದ್ದರು.
ಸುನ್ನಿ ಅರಬ್ಬರು ಬಹುಸಂಖ್ಯಾತರಿರುವ ಅಬು ಗ್ರೈಬ್ ಜಿಲ್ಲೆಯಲ್ಲಿ ಈ ತಿಂಗಳು ಎರಡನೇ ಬಾಂಬ್ ದಾಳಿಯಾಗಿದೆ ಎಂದು ಇರಾಕಿನ ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟವರ 8 ದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಅಬು ಗ್ರೈಬ್ ಆಸ್ಪತ್ರೆ ತಿಳಿಸಿದೆ. |