ಮಹತ್ವದ ನಾಗರಿಕ ಪರಮಾಣು ಒಪ್ಪಂದದಿಂದ ಸೃಷ್ಟಿಯಾದ ಸದ್ಭಾವನೆಯ ಆಧಾರದ ಮೇಲೆ ದ್ವಿಪಕ್ಷೀಯ ಸಂಬಂಧ ಹಾಗೂ ಜಾಗತಿಕ ಅಣ್ವಸ್ತ್ರ ಪ್ರಸರಣ ನಿಷೇಧ ವ್ಯವಸ್ಥೆಯನ್ನು ಭಾರತ ಮತ್ತು ಅಮೆರಿಕ ಬಲಪಡಿಸಬೇಕೆಂದು ಅಮೆರಿಕದ ಹಿರಿಯ ರಾಜತಾಂತ್ರಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನ ಇಂಧನ ಮತ್ತು ಪರಿಸರ ಅಗತ್ಯಗಳ ಪೂರೈಕೆಗೆ ಸುರಕ್ಷಿತ, ಕೈಗೆಟಕುವ ಪರಮಾಣು ಶಕ್ತಿಗೆ ಇಂಬು ನೀಡಲು ಬಲಯುತ ಎನ್‌ಪಿಟಿ(ಪ್ರಸರಣ ನಿಷೇಧ ಒಪ್ಪಂದ)ಯನ್ನು ರೂಪಿಸುವ ಜವಾಬ್ದಾರಿ ಭಾರತ ಮತ್ತು ಅಮೆರಿಕ ಎರಡಕ್ಕೂ ಇದೆ ಎಂದು ಅಮೆರಿಕ ಉಪ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಸ್ಟೇನ್‌ಬರ್ಗ್ ತಿಳಿಸಿದರು. ಎನ್‌ಪಿಟಿಗೆ ಭಾರತವು ಅಂಕಿತ ಹಾಕಿಲ್ಲದಿದ್ದರೂ, ಅಂತಾರಾಷ್ಟ್ರೀಯ ದೃಷ್ಟಿಕೋನದ ಭಾಗವಾಗಿ ತನ್ನ ಬದ್ಧತೆಗಳ ಕಡೆ ನೋಟ ಹರಿಸುವ ಸ್ಥಿತಿಯಲ್ಲಿ ಭಾರತವಿದೆಯೆಂದು ಸ್ಟೇನ್‌ಬರ್ಗ್ ಹೇಳಿದರು.
ಬ್ರೂಕಿಂಗ್ ಸಂಸ್ಥೆಯಲ್ಲಿ ಭಾರತದ ಕಡೆ ದೃಷ್ಟಿನೆಟ್ಟಿರುವ ಅಮೆರಿಕದ ನೀತಿಯ ಪ್ರಥಮ ಭಾಷಣವೆಂದು ಇದನ್ನು ಬಣ್ಣಿಸಲಾಗಿದೆ. 45 ರಾಷ್ಟ್ರಗಳ ಪರಮಾಣು ಪೂರೈಕೆ ಗುಂಪು ಭಾರತದ ಜತೆ ಪರಮಾಣು ವ್ಯಾಪಾರದ ನಿಷೇಧವನ್ನು ತೆರವು ಮಾಡಲು ಕಳೆದ ಸೆಪ್ಟೆಂಬರ್‌ನಲ್ಲಿ ಒಪ್ಪಿವೆ.
ಬಳಿಕ ಇದೇ ವೇದಿಕೆಯಲ್ಲಿ ಮಾತನಾಡಿದ ಪರಮಾಣು ವಿಷಯಗಳು ಮತ್ತು ಹವಾಮಾನ ಬದಲಾವಣೆ ಕುರಿತ ಭಾರತದ ವಿಶೇಷ ಪ್ರತಿನಿಧಿ ಶ್ಯಾಮ್ ಸರಣ್, ಭಾರತ-ಅಮೆರಿಕ ಅಣು ಒಪ್ಪಂದ ಮತ್ತು ಎನ್‌ಎಸ್‌ಜಿ ವಿನಾಯಿತಿಯಿಂದ ಜಾಗತಿಕ ಪರಮಾಣು ಸಾಮ್ರಾಜ್ಯದ ಭಾಗವೆಂದು ತಮ್ಮ ರಾಷ್ಟ್ರವನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.ಶ್ವಾಸಾರ್ಹ ಕಾಲಮಿತಿಯೊಳಗೆ ಅಣ್ವಸ್ತ್ರ ನಿಶ್ಸಸ್ತ್ರೀಕರಣದತ್ತ ಜಗತ್ತು ಚಲಿಸುವ ತನಕ ಸಿಟಿಬಿಟಿಗೆ ಭಾರತ ಸಹಿ ಹಾಕುವುದಿಲ್ಲ ಎಂದು ಸರನ್ ಪ್ರತಿಪಾದಿಸಿದರು. |