ಬಾಂಬ್ ತಯಾರಿಸಲು ಬೇಕಾದ ಸಾಮಾಗ್ರಿ, ಶಸ್ತ್ರಾಸ್ತ್ರಗಳನ್ನು ದಕ್ಷಿಣ ಬಾಂಗ್ಲಾದೇಶದ ಇಸ್ಲಾಮಿಕ್ ಶಾಲೆಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಂಗಳವಾರ ಭೋಲಾ ಜಿಲ್ಲೆಯ ಇಸ್ಲಾಮಿಕ್ ದತ್ತಿನಿಧಿಯ ಗ್ರೀನ್ ಗ್ರೇಸೆಂಟ್ ಶಾಲೆ ಮೇಲೆ ದಾಳಿ ನಡೆಸಿದ ವಿಶೇಷ ಅಪರಾಧ ನಿಗ್ರಹ ಪಡೆಯ ಅಧಿಕಾರಿಗಳು 12ಕ್ಕೂ ಅಧಿಕ ಗನ್, ಹಲವು ಸಾವಿರದಷ್ಟು ಗುಂಡುಗಳು, ಬಾಂಬ್ ತಯಾರಿಕೆಯ ಸಾಮಾಗ್ರಿ, ಜಿಹಾದಿಗೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡಿರುವುದಾಗಿ ರಾಪಿಡ್ ಆಕ್ಷನ್ ಬೆಟಾಲಿಯನ್‌ನ ಮಾನುನುರ್ ರಾಶಿದ್ ವಿವರಣೆ ನೀಡಿದ್ದಾರೆ.
ಈ ಧಾರ್ಮಿಕ(ಮದರಸಾ) ಶಾಲೆಯಲ್ಲಿ ಓರ್ವ ಟೀಚರ್ ಹಾಗೂ ಮೂರು ಮಂದಿ ನೌಕರರಿದ್ದು, ಅವರನ್ನು ಬಂಧಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ಶಾಲಾ ಆವರಣದಲ್ಲಿಯೂ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿರುವುದಾಗಿ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ಲಭ್ಯವಾಗಿಲ್ಲ,ಢಾಕಾದಿಂದ ಸುಮಾರು ನೂರು ಕಿ.ಮೀ.ದೂರದಲ್ಲಿರುವ ಈ ಕರಾವಳಿ ಪ್ರದೇಶದಲ್ಲಿ ಕೆಲವು ತಿಂಗಳ ಹಿಂದಷ್ಟೇ ಕೆಲವು ಮನೆಗಳು ತಲೆ ಎತ್ತಿದ್ದವು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. |