ಎಲ್‌ಟಿಟಿಇ ಬಂಡುಕೋರರ ಬಿಗಿಮುಷ್ಠಿಯಲ್ಲಿರುವ ಮುಲ್ಲೈತಿವ್ ವಾಯುವ್ಯ ಭಾಗದಲ್ಲಿನ ಎಲ್‌ಟಿಟಿಇ ಗುಪ್ತಚರ ದಳದ ವರಿಷ್ಠ ಪೊಟ್ಟು ಅಮ್ಮಾನ್‌ನ ಅಡಗುತಾಣವನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾ ಸೇನೆ ಬುಧವಾರ ತಿಳಿಸಿದೆ.
ಮಂಗಳವಾರ ಮುಲ್ಲೈತಿವ್‌ನ ಇರಾನಾಪಲ್ಲೈ ಎಂಬಲ್ಲಿ ಬಂಡುಕೋರ ಸಂಘಟನೆ ಮತ್ತು ಸೇನೆ ನಡುವೆ ಗುಂಡಿನ ಕಾಳಗ ನಡೆದಿದ್ದು, ಬಳಿಕ ಎಲ್‌ಟಿಟಿಇ ಗುಪ್ತಚರ ಘಟಕದ ಮುಖ್ಯಸ್ಥ ಪೊಟ್ಟು ಅಮ್ಮಾನ್ ಹಾಗೂ ಮತ್ತೊಬ್ಬ ಮುಖಂಡ ಕಾಪಿಲ್ ಅಮ್ಮಾನ್‌ನ ಪ್ರಮುಖ ಅಡಗುತಾಣವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಆ ಪ್ರದೇಶದಾದ್ಯಂತ ಸೇನಾಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಒಂದು ಜೀಪ್ ಅನ್ನು ಸಹ ವಶಕ್ಕೆ ತೆಗೆದುಕೊಂಡಿದ್ದು, ಈ ಜೀಪ್ ಪೊಟ್ಟು ಅಮ್ಮಾನ್ ಬಳಸುತ್ತಿದ್ದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ವೇಲುಪಿಳ್ಳೈ ಪ್ರಭಾಕರನ್ ಹಾಗೂ ಪೊಟ್ಟು ಅಮ್ಮಾನ್ 1991ರಲ್ಲಿ ಚೆನ್ನೈನ ಶ್ರೀಪೆರಂಬುದೂರಿನಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಮುಖ ರೂವಾರಿಗಳಾಗಿದ್ದು, ಅವರಿಬ್ಬರು ಭಾರತಕ್ಕೆ ಬೇಕಾದ ಆರೋಪಿಗಳಾಗಿದ್ದಾರೆ. |